ಹ್ಯುಂಡೈ ಇಯಾನ್ ನಿಂದ ಮಾರುತಿ ಸುಜುಕಿಗೆ ಹಿನ್ನಡೆ?!

ಆದರೆ ಮಾರುತಿಯಂತಹ ದೈತ್ಯ ಕಂಪನಿಗೆ ಪೈಪೋಟಿ ನೀಡುವುದು ಸುಲಭವಲ್ಲ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮಾರುತಿ-ಹ್ಯುಂಡೈ ಸ್ಪರ್ಧೆ ತುಸು ಕಡಿಮೆಯಾಗಿತ್ತು. ಆದರೆ ಮತ್ತೆ ಮಾರಾಟ ಯುದ್ಧ ಆರಂಭವಾಗುವ ಸೂಚನೆ ದೊರಕಿದೆ. ಈಗಾಗಲೇ ಹ್ಯುಂಡೈ ಸಣ್ಣಕಾರು ಇಯಾನ್ ಹೊಸ ಹವಾ ಸೃಷ್ಟಿಸಿದೆ.
ಮಾರುತಿ ಗ್ರಾಮೀಣ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಾಬಲ್ಯ ಪಡೆದಿದೆ. ಮಾರುತಿ ಪ್ರಾಬಲ್ಯವಿರುವಲ್ಲಿ ಮಾರುಕಟ್ಟೆ ಹೆಚ್ಚಿಸಿಕೊಳ್ಳುವುದು ಹ್ಯುಂಡೈಗೆ ನಿಜಕ್ಕೂ ಸವಾಲು. ನೂತನ ಇಯಾನ್ ಕಾರು ವಿಶೇಷವಾಗಿ ಭಾರತದ ರಸ್ತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.
ನೂತನ ಹ್ಯುಂಡೈ ಇಯಾನ್ ದರ ಸುಮಾರು 2 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಇದು ಮಾರುತಿ ಆಲ್ಟೋಗೆ ಚಳಿ ಹಿಡಿಸುವುದಂತೂ ಗ್ಯಾರಂಟಿ.
ಇಯಾನ್ 800 ಸಿಸಿ ಎಂಜಿನ್ ಹೊಂದಿದೆ. ಅಂದರೆ ಮಾರುತಿ 800 ಸೆಗ್ಮೆಂಟ್ ಕಾರು. ಮಾರುತಿ ಸುಜುಕಿ ಈಗಾಗಲೇ ಮಾರುತಿ 800 ಉತ್ಪಾದನೆ ನಿಲ್ಲಿಸಿದೆ.
ಆಕಸ್ಮಿಕವಾಗಿ ಇಯಾನ್ ಎಚ್ 800 ಹೆಸರಲ್ಲಿ ಹ್ಯುಂಡೈಯ 800ಸಿಸಿ ಕಾರು ಅನಾವರಣವಾಗಿದೆ. ಮಾರುತಿ 800 ಸ್ಥಾನವನ್ನು ಇಯಾನ್ ಬಾಚಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಹ್ಯುಂಡೈ ಇಯಾನ್ ಈಗಾಗಲೇ ನೆಟ್ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದೆ. ಕಂಪನಿಯ ಜಾಹೀರಾತುಗಳು, ಮಾಧ್ಯಮ ವಿಮರ್ಶೆಗಳು ಇಯಾನ್ ಕಾರನ್ನು ಹೆಚ್ಚು ಜನಪ್ರಿಯಗೊಳಿಸಿವೆ. ಕಡಿಮೆ ದರದ ಈ ಕಾರು ಮಾಸ್ ಜನರಿಗೆ ಇಷ್ಟವಾಗುವ ನಿರೀಕ್ಷೆ ಎಲ್ಲರಿಗಿದೆ.
ಈಗಾಗಲೇ ಇಯಾನ್ ಬುಕ್ಕಿಂಗ್ ಕೂಡ ಆರಂಭವಾಗಿದೆ. ಆದರೆ ಈ ಕಾರು ಬಿಡುಗಡೆಯಾಗುವುದು ಅಕ್ಟೋಬರ್ 13ರಂದು. ಅಂದರೆ ಇನ್ನು ಬೆರಳೆಣಿಕೆಯ ದಿನಗಳಿವೆಯಷ್ಟೇ! ಕೆಲವು ಶೋರೂಂಗಳಲ್ಲಿ ಇಯಾನ್ ಬುಕ್ಕಿಂಗ್ ಶುಲ್ಕ 25 ಸಾವಿರ ರು. ಇದೆ. ಕೆಲವು ಡೀಲರುಗಳು ಅದಕ್ಕಿಂತ ಕಡಿಮೆ ದರಕ್ಕೂ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.
ಮಾರುತಿ ಸುಜುಕಿ ಈಗಾಗಲೇ ನೌಕರರ ಕಿರಿಕಿರಿಯಿಂದ ಬಸವಳಿದಿದೆ. ಹೆಚ್ಚು ಹೈಪ್ ಕ್ರಿಯೇಟ್ ಮಾಡಿದ್ದ ಹೊಸ ಸ್ವಿಫ್ಟ್ ಕಾರನ್ನು ಸಮರ್ಪಕವಾಗಿ ಪೂರೈಸಲಾಗಿದೇ ಪರದಾಡುತ್ತಿದೆ. ಇದೇ ಸಮಯಕ್ಕೆ ಬಂದ ಇಯಾನ್ ಮಾರುತಿ ಕಂಪನಿಗೆ ನಿಜಕ್ಕೂ ಸವಾಲು. ಈ ಪುಟ್ಟ ಕಾರು ಎಷ್ಟು ಜನರಿಗೆ ಇಷ್ಟವಾಗಬಹುದು ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications








