ಶಿರಡಿ ಸಾಯಿಬಾಬಾ ದಯೆ, ಕಂದಕಕ್ಕೆ ಬಿದ್ದರೂ ಬದುಕುಳಿದೆವು

ಚಿಕ್ಕಮಗಳೂರಿನ ಅಶ್ವಿನ್ ಕುಮಾರ್ ಮತ್ತು ಸಹಚಾಲಕ ಅನೂಪ್ ಕುಮಾರ್ ರಾಲಿ ಆಫ್ ಮಹಾರಾಷ್ಟ್ರದಲ್ಲಿ ಭಾಗವಹಿಸಿದ್ದರು. ಅವರಲ್ಲಿದ್ದದ್ದು ಮಾರುತಿ ಎಸ್ಟೀಮ್. ಯಾವುದೇ ಸ್ಪೋರ್ಟ್ಸ್ ಕಂಪನಿಯನ್ನು ಹೊಂದಿರದೆ ಅವರಿಬ್ಬರೂ ತಮ್ಮದೇ ಖರ್ಚಿನಲ್ಲಿ ರಾಲಿಯಲ್ಲಿ ಕಾರು ಚಲಾಯಿಸುತ್ತಿದ್ದರು.
ಶನಿವಾರ ನಾಸಿಕ್ ನ ಕಡಿದಾದ ಹಾದಿಯಲ್ಲಿ ಕಾರು ಚಲಾಯಿಸುತ್ತಿದ್ದರು. ಬೆಟ್ಟದ ಹಾದಿಯಲ್ಲಿ ಸಾಗುವಾಗ ಒಮ್ಮೆಗೆ ಕಾರಿನ ವೇಗ ಹೆಚ್ಚಿಸಿಕೊಂಡರು. ಅನಿರೀಕ್ಷಿತವಾಗಿ ಎದುರಾದ ತಿರುವು ಇವರ ಪ್ರಾಣ ಕಸಿದುಕೊಳ್ಳಲು ಸಿದ್ಧವಾಗಿತ್ತು. ಆಯತಪ್ಪಿ ಕಾರು ಸುಮಾರು 300 ಅಡಿ ಕಣಿವೆಗೆ 7 ಬಾರಿ ಪಲ್ಟಿ ಹೊಡೆಯುತ್ತ ಬೀಳತೊಡಗಿತು.
ಕಾರು ರಾಲಿ ಇಬ್ಬರು ಚಾಲಕರ ಸಾವಿನಲ್ಲಿ ಅಂತ್ಯವಾಯ್ತು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ 300 ಅಡಿಗೆ ಬಿದ್ದ ಕಾರು ಮರವೊಂದರಲ್ಲಿ ಸಿಲುಕಿಕೊಂಡಿತ್ತು. ಅದರಿಂದ ಇವರಿಬ್ಬರು ಎದ್ದು ಬಂದಾಗ ಎಲ್ಲರಿಗೂ ಅಚ್ಚರಿ, ಸಂತೋಷ, ಸಂಭ್ರಮ. ಅವರಿಬ್ಬರ ಪಾಲಿಗೆ ಅದು ಪುನರ್ಜನ್ಮ. ಅವರಿಗೆ ಸಣ್ಣ ಪುಟ್ಟ ಗಾಯವಾಗಿತ್ತು.
"ಶಿರಡಿ ಸಾಯಿಬಾಬಾರ ಅನುಗ್ರಹ. ಅವಘಡವಾದರೂ ಜೀವ ಉಳಿದಿದೆ. ಮುಂದಿನ ಬಾರಿ ಎಚ್ಚರಿಕೆಯಿಂದ ಕಾರು ಚಲಾಯಿಸುತ್ತೇವೆ" ಎಂದು ಅವರು ಸಾಯಿಬಾಬಾ ದರ್ಶನ ಮಾಡುತ್ತ ಶಿರಡಿಯಲ್ಲಿ ಪತ್ರಕರ್ತರಿಗೆ ಹೇಳಿದ್ದಾರೆ. ರಾಲಿ ಆಫ್ ಮಹಾರಾಷ್ಟ್ರದಲ್ಲಿ ಟೀಮ್ ಎಂಆರ್ಎಫ್ ಗೆಲುವು ಪಡೆದುಕೊಂಡಿದೆ.


Click it and Unblock the Notifications








