ಹೊಸ ಅವತಾರದಲ್ಲಿ ಪುಟ್ಟ ಕಾರು, ನ್ಯಾನೊ ವಿ2

ಇದೀಗ ಟಾಟಾ ಮೋಟರ್ಸ್ ನ್ಯಾನೊ ವಿ2 ಎಂಬ ನ್ಯಾನೊ ಫೇಸ್ ಲಿಫ್ಟ್ ಆವೃತ್ತಿಯನ್ನು ಹೊರತರುತ್ತಿದೆ ಎಂದು ವರದಿಗಳು ಹೇಳಿವೆ. ಕೆಲವು ಮೂಲಗಳ ಪ್ರಕಾರ ಈ ಕಾರು ಈಗಾಗಲೇ ಟಾಟಾ ಮೋಟರ್ಸ್ ಶೋರೂಂ ತಲುಪಿದೆಯಂತೆ. ಆದರೆ ಈ ಕುರಿತು ಟಾಟಾ ಮೋಟರ್ಸ್ ಯಾವುದೇ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ.
ಹೊಸ ನ್ಯಾನೊ ಕಾರು ಹೆಚ್ಚು ಶಕ್ತಿಶಾಲಿ ಮತ್ತು ದಕ್ಷತೆಯ ಎಂಜಿನ್ ಹೊಂದಿರಲಿದೆ ಎಂದು ವರದಿಗಳು ಹೇಳಿವೆ. ಜೊತೆಗೆ ಟಾಟಾ ಮೋಟರ್ಸ್ ಎರಡು ಸಿಲಿಂಡರ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ ಎಂದು ಈ ಹಿಂದೆ ವರದಿ ಮಾಡಿದ್ದೇವು. ಮೂರು ಸಿಲಿಂಡರ್ ಎಂಜಿನ್ ಬದಲಿಗೆ, ಎರಡು ಸಿಲಿಂಡರ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವುದು ಏತಕ್ಕೆ ಎಂದು ಇನ್ನೂ ಖಚಿತವಾಗಿಲ್ಲ.
ಹೊಸ ನ್ಯಾನೊ ಆವೃತ್ತಿಯಲ್ಲಿ ಹೊಸ ಫೀಚರುಗಳು ಇರಲಿವೆ. ಅಂದರೆ ಮರುವಿನ್ಯಾಸ ಮಾಡಿದ ಸೀಟು ಮತ್ತು ಫ್ಯಾಬ್ರಿಕ್, ಹೊಸ ಬಣ್ಣದ ಡ್ಯಾಷ್ ಬೋರ್ಡ್, ಮುಂಭಾಗದ ಸೀಟಿಗೆ ಹೆಡ್ ರೆಸ್ಟ್, ಫ್ಲೋರ್ ಮ್ಯಾಟ್, ಮರುವಿನ್ಯಾಸ ಮಾಡಿದ ವೀಲ್ಹ್ ಕ್ಯಾಪ್ ಮತ್ತು ಪ್ರಯಾಣಿಕ ಸೀಟು ಬದಿಯಲ್ಲಿ ರಿಯರ್ ವ್ಯೂ ಮಿರರ್ ಇತ್ಯಾದಿಗಳು ಇರಲಿವೆ. ಜೊತೆಗೆ ನ್ಯಾನೊ ವಿ2 ಹೊಸ ಆಕರ್ಷಕ ಬಣ್ಣಗಳಲ್ಲಿ ಬರಲಿದೆಯಂತೆ.
ವದಂತಿಗಳ ಪ್ರಕಾರ ನೂತನ ಫೇಸ್ ಲಿಫ್ಟ್ ನ್ಯಾನೊ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ. ಹೊಸ ಫೀಚರು ಮತ್ತು ಪೇಂಟ್ ಬಣ್ಣದಿಂದಾಗಿ ನ್ಯಾನೊ ಹೆಚ್ಚು ಆಕರ್ಷಕವಾಗುವುದರಲ್ಲಿ ಸಂಶಯವಿಲ್ಲ. ಇದು ಇನ್ನಷ್ಟು ಇಂಧನ ದಕ್ಷತೆ ನೀಡಿದರೆ ದ್ವಿಚಕ್ರ ವಾಹನ ಗ್ರಾಹಕರನ್ನೂ ಸೆಳೆಯಬಹುದು. ಟಾಟಾ ಮೋಟರ್ಸ್ ಹೊಸ ಕಾರಿನ ಕುರಿತು ಬಾಯಿಬಿಡುವರೆಗೆ ಕಾಯೋಣ.


Click it and Unblock the Notifications








