ಹ್ಯುಂಡೈ ಇಯಾನ್ "ಆನ್", ಮಾರುತಿ ಆಲ್ಟೊ "ಆಫ್"

ಇವೆರಡರ ದರ ಕೂಡ ತಕ್ಕಮಟ್ಟಿಗೆ ಒಂದೇ ರೀತಿ ಇವೆ. ಹ್ಯುಂಡೈ ಇಯಾನ್ ದರ ಸುಮಾರು 2 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಆಲ್ಟೊಕ್ಕಿಂತ ಕಡಿಮೆ ದರವಿದ್ದರೆ ಹೆಚ್ಚು ಜನರು ಇಯಾನ್ ಕಡೆಗೆ ಮುಖ ಮಾಡುವುದರಲ್ಲಿ ಸಂಶಯವಿಲ್ಲ.
ಹ್ಯುಂಡೈ ಇಯಾನ್ ಮಾರುತಿ 800 ಸ್ಥಾನ ತುಂಬುವ ನಿರೀಕ್ಷೆಯಿದೆ. ಮಾರುತಿ 800 ಭಾರತದಲ್ಲಿ ಅತ್ಯಧಿಕ ಮಾರಾಟವಾಗಿರುವ ಕಾರು. ಇಯಾನ್ ಗೂ ಆಲ್ಟೋ ಕಾರಿಗೂ ಸಾಕಷ್ಟು ಹೋಲಿಕೆಗಳಿವೆ.
ಕಳೆದ ಕೆಲವು ವರ್ಷಗಳಿಂದ ಮೊದಲ ಬಾರಿಗೆ ಕಾರು ಖರೀದಿಸುವರು ಆಲ್ಟೊ ಖರೀದಿಸುತ್ತಿದ್ದರು. ಅದರ ಕಡಿಮೆ ದರ, ಸರ್ವಿಸ್, ಕಂಪನಿಯ ವಿಶಾಲ ನೆಟ್ ವರ್ಕ್ ಜಾಲವೂ ಇದಕ್ಕೆ ಕಾರಣ. ಹ್ಯುಂಡೈ ಇದನ್ನು ಸವಾಲಾಗಿ ಸ್ವೀಕರಿಸುವ ನಿರೀಕ್ಷೆಯಿದೆ.
ಇಯಾನ್ ದರವೂ ಕಡಿಮೆಯಿದೆ. ಅಂದರೆ ಕೇವಲ 2 ಲಕ್ಷ ರು. ಹ್ಯುಂಡೈ ದೇಶದಲ್ಲಿ ಮಾರುಕಟ್ಟೆ ಜಾಲವನ್ನು ವಿಸ್ತರಿಸುವುದಾಗಿಯೂ ಪ್ರಕಟಿಸಿದೆ.
ಆಲ್ಟೊ ಮಾರಾಟ ಹೆಚ್ಚಲು ಅದರ ವಿನ್ಯಾಸ ಪ್ರಮುಖ ಕಾರಣವಲ್ಲ. ಆದರೆ ಅದು ಮಾರುತಿ 800 ಕಾರಿನ ಪರಿಷ್ಕೃತ ಆವೃತ್ತಿ ಕೂಡ ಹೌದು. ಆದರೆ ಇಯಾನ್ ಕಾರು ನೂತನ ಫ್ಲೂಡಿಕ್ ವೆರ್ನಾ ಕಾರಿನ ಫ್ಲೂಡಿಕ್ ವಿನ್ಯಾಸ ಪರಿಕಲ್ಪನೆಯಿಂದ ಬರಲಿದೆ. ಇದು ಕೂಡ ಆಲ್ಟೊಗೆ ಸವಾಲು ನೀಡಲಿದೆ.
ಆಲ್ಟೊದ ಇಂಟಿರಿಯರ್ ಹೆಚ್ಚು ಆಕರ್ಷಕವಲ್ಲ ಅನ್ನೋದು ನಿಜ. ಇಂಟಿರಿಯರ್ ಪ್ಲಾಸ್ಟಿಕ್ ಕೂಡ ದರ್ಜೆಯಲ್ಲಿ ಸಾಮಾನ್ಯವಾಗಿದೆ. ಆದರೆ ಇಯಾನ್ ಕಾರಿನಲ್ಲಿ ಇಂಟಿರಿಯರ್, ಪ್ಲಾಸ್ಟಿಕ್, ಮೆಟಿರಿಯಲ್ ಗಳು ಅತ್ಯುತ್ತಮ ದರ್ಜೆಯಲ್ಲಿರಲಿವೆ ಎಂದು ಹ್ಯುಂಡೈ ಪ್ರಾಮೀಸ್ ಮಾಡಿದೆ. ಆದರೆ ಇಯಾನ್ ಅಗ್ಗದ ಕಾರಾಗಿರುವುದರಿಂದ ಹೆಚ್ಚು ಅತ್ಯುತ್ತಮ ದರ್ಜೆಯ ಮೆಟಿರಿಯಲ್ ನಿರೀಕ್ಷಿಸುವುದು ಸಾಧುವಲ್ಲ.
ಇಂಟಿರಿಯರ್ ಸ್ಥಳಾವಕಾಶವೂ ಪ್ರಮುಖ ಅಂಶ. ಅಂದರೆ ಮಾರುತಿ ಆಲ್ಟೊ ಕಾರಲ್ಲಿ ಉದ್ದದ ವ್ಯಕ್ತಿಗಳು ಆರಾಮವಾಗಿ ಕುಳಿತುಕೊಳ್ಳುವುದು ಕಷ್ಟ. ಆದರೆ ಆಲ್ಟೊಗಿಂತ ಹೆಚ್ಚು ಸ್ಥಳಾವಕಾಶ ನೀಡುವುದಾಗಿ ಇಯಾನ್ ಪ್ರಾಮೀಸ್ ಮಾಡಿದೆ. ಆಲ್ಟೊ ಹಿಂಭಾಗದಲ್ಲಿ ಮೂರು ಜನರು ಕುಳಿತುಕೊಳ್ಳುವುದು ಕಷ್ಟ. ಲಗೇಜ್ ಸ್ಥಳಾವಕಾಶವೂ ಆಲ್ಟೊದಲ್ಲಿ ಕಡಿಮೆಯಾಗಿದೆ. ಇಯಾನ್ ನಲ್ಲಿ ಇವೆಲ್ಲ ಅತ್ಯುತ್ತಮವಾಗಿದ್ದರೆ ಖಂಡಿತ ಹೆಚ್ಚು ಜನರಿಗೆ ಇಷ್ಟವಾಗೋದರಲ್ಲಿ ಸಂಶಯವಿಲ್ಲ.
ಇಯಾನ್ ಯಾವೆಲ್ಲ ಫೀಚರು, ವಿಶೇಷತೆಗಳಿಂದ ಹೊರಬರಲಿದೆ ಎಂದು ಸದ್ಯ ಊಹಿಸುವುದು ಕಷ್ಟ. ಹೀಗಾಗಿ ಆಲ್ಟೊದೊಂದಿಗೆ ಸಮರ್ಪಕ ಹೋಲಿಕೆ ಮಾಡಲು ಸಾಧ್ಯವಿಲ್ಲ. ಆದರೂ ಆಟೋ ವಿಶ್ಲೇಷಕರು ಈಗಾಗಲೇ ಆಲ್ಟೊಗೆ ಇಯಾನ್ ಪ್ರಬಲ ಪೈಪೋಟಿ ನೀಡಲಿದೆ ಎಂದು ಷರಾ ಬರೆದಿದ್ದಾರೆ. ಎಲ್ಲದಕ್ಕೂ ನಾವು ಕಾದು ನೋಡೋಣ.


Click it and Unblock the Notifications








