ಆಡಿ ಇಂಡಿಯಾಕ್ಕೆ ಶೇ. 45 ಮಾರಾಟ ಹೆಚ್ಚಳದ ಕನಸು
ದೇಶದಲ್ಲಿ ಗ್ರಾಹಕರನ್ನು ಸೆಳೆಯಲು ಕಂಪನಿಯು ಈಗಾಗಲೇ ಆಡಿ ಕಾರ್ ಲೈಫ್ ಅಡ್ವಾನ್ಸ್ ಕಾರ್ಯಕ್ರಮವನ್ನೂ ಆರಂಭಿಸಿದೆ. ಈ ಮೂಲಕ ಗ್ರಾಹಕರು ಸುಲಭದಲ್ಲಿ ಕಾರು ಸಾಲ ಪಡೆಯಲು ನೆರವಾಗಲಿದೆ. ಈ ಸ್ಕೀಮ್ ನಲ್ಲಿ ಗ್ರಾಹಕರಿಗೆ ಕಾರಿನ ವಾರೆಂಟಿ ವಿಸ್ತರಣೆ, ವಿಮೆ ಸೇರಿದಂತೆ ಸಾಕಷ್ಟು ಸೌಲಭ್ಯವನ್ನು ಕಂಪನಿ ಕೊಡಲಿದೆ.
"2012ರ ಅಂತ್ಉಕ್ಕೆ ಕಂಪನಿಯು ಸುಮಾರು 8 ಸಾವಿರಕ್ಕಿಂತಲೂ ಹೆಚ್ಚು ಕಾರುಗಳನ್ನು ದೇಶದಲ್ಲಿ ಮಾರಾಟ ಮಾಡುವ ಯೋಜನೆ ಹೊಂದಿದ್ದೇವೆ. ಕಂಪನಿಯು ಕಳೆದ ವರ್ಷ ಇಲ್ಲಿ 5,511 ಕಾರು ಮಾರಾಟ ಮಾಡಿತ್ತು. ಹೀಗಾಗಿ ಪ್ರಸಕ್ತ ವರ್ಷದ ಗುರಿಯನ್ನು ಸಾಧಿಸುವ ಭರವಸೆ ನಮಗಿದೆ" ಎಂದು ಆಡಿ ಇಂಡಿಯಾ ಮುಖ್ಯಸ್ಥ ಮೈಕಲ್ ಪಾರ್ಷ್ಕೆ ಹೇಳಿದ್ದಾರೆ.
ಇತ್ತೀಚೆಗೆ ಅಬಕಾರಿ ಸುಂಕ ಮತ್ತು ಆಮದು ಸುಂಕ ಹೆಚ್ಚಾಗಿರುವುದು ಐಷಾರಾಮಿ ಕಾರು ಮಾರಾಟಕ್ಕೆ ಕೊಂಚ ಹೊಡೆತ ನೀಡಿದೆ ಎನ್ನುವುದನ್ನು ಪಾರ್ಷ್ಕೆ ಒಪ್ಪುತ್ತಾರೆ. "ಕಂಪನಿಯು ಭಾರತದಲ್ಲಿ ಜೋಡಿಸುವ ವಾಹನಗಳ ದರ ಸರಾಸರಿ ಶೇ. 3ರಷ್ಟು ಮತ್ತು ಆಮದು ಮಾಡುವ ಕಾರುಗಳು ಶೇಕಡ 13ರಷ್ಟು ದುಬಾರಿಯಾಗಿವೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ಕಂಪನಿಯು ದೇಶದ ಘಟಕದಲ್ಲಿ ಆಡಿ ಎ4, ಎ6 ಮತ್ತು ಕ್ಯೂ5 ಕಾರುಗಳನ್ನು ಅಸೆಂಬಲ್ ಮಾಡುತ್ತದೆ. ಇದೀಗ ಈ ಕಾರುಗಳ ದರ 27.85 ಲಕ್ಷ ರುಪಾಯಿಯಿಂದ 47.68 ಲಕ್ಷ ರುಪಾಯಿವರೆಗಿದೆ.
ಆಡಿ ಕಂಪನಿಯು ಟಿಟಿ, ಕ್ಯೂ7, ಆರ್‌ಎಸ್5, ಆರ್8 ಮತ್ತು ಆರ್8 ಸ್ಪೈಡರ್ ಮುಂತಾದ ಕಾರುಗಳನ್ನು ಪೂರ್ಣ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಈ ಕಾರುಗಳ ದರ ಸುಮಾರು 49.48 ಲಕ್ಷ ರುಪಾಯಿಯಿಂದ 1.7 ಕೋಟಿ ರುಪಾಯಿವರೆಗಿದೆ.


Click it and Unblock the Notifications









