ಬೆಂಗ್ಳೂರು ಅಹ್ಮದ್ ಅಭಿವೃದ್ಧಿಪಡಿಸಿದ ಸೋಲಾರ್ ಕಾರು
ಅರಮನೆ ಮೈದಾನದಲ್ಲಿ ಮೈನವಿರೇಳಿಸುವ ಆಟೋ ಕ್ರಾಸ್ ಕಾರು ರೇಸ್ ನೋಡಿ ಡ್ರೈವ್ ಸ್ಪಾರ್ಕ್ ತಂಡ ವಾಪಸ್ ಬರುತ್ತಿತ್ತು. ರೇಸ್ ಕೋರ್ಸ್ ರಸ್ತೆಯ ಹೋಟೆಲ್ ಲಲಿತ್ ಅಶೋಕ್ ಪಕ್ಕದ ಸಿಎಂ ನಿವಾಸದ ಬಳಿ ಸಂಚಾರ ದಟ್ಟಣೆಯ ನಡುವೆ ಅನ್ಯಗ್ರಹದಿಂದ ಬಂದ ಹಾರುವ ತಟ್ಟೆಯನ್ನು ಹೋಲುವ ವಾಹನ ನಮ್ಮ ಕಣ್ಮನ ಸೆಳೆಯಿತು. ಅದು ಸೋಲಾರ್ ಕಾರು.
ಬೆಂಗಳೂರಿನ ಸೈಯೆದ್ ಮುಜಾಕಿರ್ ಅಹ್ಮದ್ ಈ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ. ಇಂಧನ ದರ ಮತ್ತು ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಈ ಸಮಯದಲ್ಲಿ ಹೊಸ ಆಶಾಕಿರಣದಂತೆ ತೋರಿದ ಈ ಕಾರಿನತ್ತ ಒಂದಿಷ್ಟು ಗಮನವೂ ನೀಡದೇ ಸೈರನ್ ಮೊಳಗಿಸುತ್ತ ಹೋದ ಸಿಎಂ ಕಾರು "ಸೋಲರ್ ಕಾರು ಅನ್ವೇಷಣೆ"ಯತ್ತ ರಾಜ್ಯದ ಅಸಡ್ಡೆಗೆ ಕನ್ನಡಿ ಹಿಡಿಯುವಂತಿತ್ತು.
ಅಹ್ಮದ್ ಅಭಿವೃದ್ಧಿಪಡಿಸಿದ ಸೌರಶಕ್ತಿ ಚಾಲೀತ ಕಾರು ಹೊಗೆ ಉಗುಳೋದಿಲ್ಲ, ರನ್ನಿಂಗ್ ವೆಚ್ಚವಿಲ್ಲ, ಪೆಟ್ರೋಲ್, ಡೀಸೆಲಿಗೆ ದುಡ್ಡು ಸುರಿಯಬೇಕಿಲ್ಲ. ಒಂದ್ರೂಪಾಯಿಯ ಇಂಧನವೂ ಖರ್ಚು ಮಾಡದೇ ದಿನಕ್ಕೆ ಸುಮಾರು 50 ಕಿ.ಮೀ. ಪ್ರಯಾಣಿಸಬಹುದು.
ಅಲ್ಲೆ ಪಕ್ಕದಲ್ಲಿ ಸೋಲಾರ್ ಕಾರು ನಿಲ್ಲಿಸಿ ನಮ್ಮೊಂದಿಗೆ ಮಾತಿಗಿಳಿದ ಅಹ್ಮದ್ ಮಾತಲ್ಲಿ ಹೊಸ ಸಾಮಾಜಿಕ ಆಯಾಮವೂ ಕಾಣಿಸಿದೆ. ಸೋಲಾರ್ ಕಾರಿನ ಮೂಲಕ ಭ್ರಷ್ಟಚಾರ ವಿರುದ್ಧ ಹೋರಾಡುವ ಯೋಚನೆ ಇವರಿಗಿದೆ. ಆದರೆ ಸದ್ಯ ಸ್ಪಾನ್ಸರ್ ಸಮಸ್ಯೆ. ಯಾರಾದರೂ ಬೆಂಬಲ ನೀಡಿದರೆ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಈ ಸೋಲಾರ್ ಕಾರಲ್ಲಿ ಮಾಡಲಿದ್ದಾರಂತೆ.
ರಾಜ್ಯದಲ್ಲಿ ಸೋಲಾರ್ ಕಾರಿಗೆ ಸರಿಯಾದ ಉತ್ತೇಜನಾ ಸಿಕ್ಕಿಲ್ಲವೆಂಬ ದೂರು ಅವರಲ್ಲಿದೆ. ಇಂಧನ ಸಚಿವೆ ಈ ಕಾರಲ್ಲಿ ಒಮ್ಮೆ ಪ್ರಯಾಣಿಸಿದ್ದಾರಂತೆ. ಆದ್ರೆ ಯಾವುದೇ ಉತ್ತೇಜನ, ಪ್ರೋತ್ಸಾಹ ನೀಡಿಲ್ಲವೆಂದು ನಮ್ಮಲ್ಲಿ ಅವಲತ್ತುಕೊಂಡಿದ್ದಾರೆ.
ಈ ಸೋಲಾರ್ ಕಾರು ಮೂರು ಪ್ರಮುಖ ಸೌರ ಪ್ಯಾನೆಲ್ ಹೊಂದಿದೆ. ಒಂದು ಪ್ಯಾನೆಲ್ ಮುಂಭಾಗದ ಬ್ಯಾನೆಟ್ ಮೇಲೆ, ಮತ್ತೊಂದು ರೂಫ್ ಮೇಲೆ, ಮತ್ತೊಂದು ಕಾರಿನ ಹಿಂಭಾಗದಲ್ಲಿದೆ. ಸೋಲಾರ್ ಪ್ಯಾನೆಲ್ ಮೂಲಕ ಬ್ಯಾಟರಿ ಚಾರ್ಜ್ ಆಗಿ, ಎಲೆಕ್ಟ್ರಿಕ್ ಮೋಟರಿಗೆ ಪವರ್ ಪೂರೈಕೆಯಾಗಿ ಬಂಡಿ ಸಾಗುತ್ತದೆ.
ಈ ಸೋಲಾರ್ ಕಾರು ಒಮ್ಮೆ ಪೂರ್ತಿ ಚಾರ್ಜ್ ಮಾಡಿದ್ರೆ ಸುಮಾರು 50 ಕಿ.ಮೀ. ಸಾಗುತ್ತದೆ. ಒಂದು ದಿನದ ಸೂರ್ಯನ ಬೆಳಕಿನಲ್ಲಿ ಬ್ಯಾಟರಿ ಪೂರ್ತಿ ಚಾರ್ಜ್ ಆಗುತ್ತೆ ಅನ್ನುತ್ತಾರೆ. ಮೋಡ ಮುಸುಕಿದ ದಿನಗಳಲ್ಲಿ ಬೇಕಾದ್ರೆ ಕರೆಂಟ್ ಪ್ಲಗ್ ಮೂಲಕವೂ ಚಾರ್ಜ್ ಮಾಡಬಹುದು. ಹೀಗಾಗಿ ಇದನ್ನು ಸೋಲಾರ್ ಹೈಬ್ರಿಡ್ ಎಲೆಕ್ಟ್ರಿಕ್ ಕಾರೆಂದು ಕರೆಯಬಹುದು. ಸದ್ಯ ಇಂಧನ ದರಗಳು ದುಬಾರಿಯಾಗುತ್ತಿರುವ ಸಮಯದಲ್ಲಿ ಇದು ಅವಶ್ಯಕ ಕಾರು.
ಸ್ವಂತ ಸೌರಶಕ್ತಿ ಚಾಲೀತ ಕಾರಿನಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವ ಮೂಲಕ ಸೋಲಾರ್ ಕಾರುಗಳ ಕುರಿತು ಜನರ ಗಮನ ಸೆಳೆಯುತ್ತಿದ್ದಾರೆ. ಇಂತಹ ಕಾರುಗಳೇ ಭೂಮಿ ಉಳಿಸಬಲ್ಲದು ಎನ್ನುವುದು ಅವರ ದೃಢ ನಂಬಿಕೆ.
ಈ ಕಾರಿನ ಪ್ರಚಾರಕ್ಕಾಗಿ ಸೋಲಾರ್ ಕಾರಿನಲ್ಲೇ ಸುಮಾರು 600 ಕಿ.ಮೀ. ಪ್ರಯಾಣಿಸಿದ್ದಾರೆ. ಅಂದ್ರೆ ಬೆಂಗಳೂರಿನಿಂದ ಕೊಚ್ಚಿನ್ ತನಕ ಪ್ರಯಾಣ ಬೆಳೆಸಿದ್ದಾರೆ. ತನ್ನ ಸೋಲಾರ್ ಕಾರು ಉತ್ತೇಜನ ಮತ್ತು ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಒಂದಿಷ್ಟು ಪ್ರೋತ್ಸಾಹವನ್ನು ಅವರು ಬಯಸುತ್ತಿದ್ದಾರೆ. ಅವರ ಇಮೇಲ್ ಐಡಿ: [email protected]. ಮೊಬೈಲ್ ನಂಬರ್: 9845229757


Click it and Unblock the Notifications
