ಬೆಂಗ್ಳೂರು ವಿದ್ಯಾರ್ಥಿಗಳಿಂದ 240 ಕಿ.ಮೀ. ಮೈಲೇಜ್ ಕಾರು
ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಇನ್ಶುಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಹನ್ನೊಂದು ವಿದ್ಯಾರ್ಥಿಗಳು ಹಗುರವಾದ, ಒಂದು ಸೀಟಿನ ಈ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಾಹನದ ಮೂಲಕ ಮಲೇಷ್ಯಾದ ಸೆಪಾಂಗ್ ರೇಸ್ ಟ್ರಾಕಿನಲ್ಲಿ ನಡೆಯಲಿರುವ ಎಕೊ ಮ್ಯಾರಥಾನ್‌ನಲ್ಲಿ ಬೆಂಗಳೂರು ಎಂಜಿನಿಯರಿಂಗ್ ಸಂಸ್ಥೆಯು ಪಾಲ್ಗೊಳ್ಳಲಿದೆ.
ಜುಲೈ ನಾಲ್ಕರಿಂದ ಏಳರ ತನಕ ನಡೆಯಲಿರುವ ಮಲೇಷ್ಯಾ ಮ್ಯಾರಥಾನಿಗೆ ಏಷ್ಯಾದ ಸುಮಾರು 150 ತಂಡಗಳು ಆಗಮಿಸಲಿವೆ. ಇದರಲ್ಲಿ ನಮ್ಮ ಬೆಂಗಳೂರು ತಂಡವೂ ಇರಲಿದೆ ಎನ್ನುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ.
ಪರಿಷ್ಕೃತ ಬಜಾಜ್ ಎಂಜಿನಿನ ನೆರವಿನಿಂದ ಈ ವಿಶೇಷ ಕಾರು ಅದ್ಬುತವೆನಿಸುವ ಮೈಲೇಜ್ ನೀಡುತ್ತಿದೆ. ಶೆಲ್ ಎಕೊ ಮ್ಯಾರಥಾನಿನಲ್ಲಿ ಭಾಗವಹಿಸಲು ಅತ್ಯಧಿಕ ಮೈಲೇಜ್ ಪ್ರಮುಖ ಮಾನದಂಡವಾಗಿದೆ. ಬೆಂಗಳೂರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮ್ಯಾರಥಾನ್ ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಮೈಲೇಜ್ ಕಾರನ್ನೇ ನಿರ್ಮಿಸಿದ್ದಾರೆ.
ದ್ರೋಣ ಹೆಸರಿನ ನೂತನ ಕಾರು ಸಮತಟ್ಟದ ರಸ್ತೆಯಲ್ಲಿ ಚಲಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ವಿಶೇಷವೆಂದರೆ ಇದಕ್ಕೆ ಪ್ರಬಲ ಸಸ್ಪೆನ್ಷನ್ ಇಲ್ಲ. ಇದರಲ್ಲಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. ಪ್ರಾಯೋಜಕರು ಮತ್ತು ಬೆಂಬಲ ಸಿಕ್ಕರೆ ರಸ್ತೆಯಲ್ಲಿ ಚಲಿಸಲು ಸಾಧ್ಯವಾಗುವಂತಹ ಕಾರನ್ನು ಅಭಿವೃದ್ಧಿಪಡಿಸುವುದಾಗಿ ವಿದ್ಯಾರ್ಥಿಗಳು ಹೇಳುತ್ತಾರೆ.
ಇಂತಹ ಅನ್ವೇಷಣೆಗಳಿಗೆ ಸರಕಾರ, ಕಾರು ಕಂಪನಿಗಳು ಬೆಂಬಲ ನೀಡಬೇಕಿದೆ. ಇಂತಹ ಅನ್ವೇಷಣೆಯು ಪ್ರಸಕ್ತ ದುಬಾರಿ ಇಂಧನ ದರ ಕಾಲದಲ್ಲಿ ಅತಿಅವಶ್ಯಕವೂ ಹೌದು. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಇನ್ಸೂಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಅಭಿನಂದನೆ.


Click it and Unblock the Notifications









