ಟಿಂಟೆಡ್ ಗ್ಲಾಸ್ ನಿಷೇಧ: ಎಷ್ಟು ಜನ ದಂಡ ಕಟ್ಟಿದ್ರು?
ಉದ್ಯಾನನಗರಿಯ ಎಲ್ಲಾ ವಲಯಗಳಲ್ಲೂ ನಿನ್ನೆ ಆರ್‌ಟಿಒ ಅಧಿಕಾರಿಗಳು ವಾಹನಗಳ ಕಿಟಕಿಗಳನ್ನು ಪರಿಶೀಲಿಸಿದ್ದಾರೆ. ಟಿಂಟೆಡ್ ಫಿಲ್ಮ್ ತೆಗೆಸದ ವಾಹನ ಮಾಲಿಕರ ವಿರುದ್ಧ ಮೋಟರ್ ವಾಹನ ಕಾಯಿದೆಯಡಿ ದೂರು ದಾಖಲಿಸಿ ದಂಡ ವಿಧಿಸಿದ್ದಾರೆ.
ಕೆಲವು ಕಡೆ ಟ್ರಾಫಿಕ್ ಪೊಲೀಸರು ಮಾಮೂಲಿ ತೆಗೆದುಕೊಂಡು, ಬೇಗ ಟಿಂಟೆಡ್ ತೆಗೆಸಿಬಿಡಿ ಎಂದು ಎಚ್ಚರಿಸಿ ಕಳುಹಿಸಿದ್ದಾರೆಂದು ಕೆಲವು ಕಾರು ಮಾಲಿಕರು ಕನ್ನಡ ಡ್ರೈವ್ ಸ್ಪಾರ್ಕಿಗೆ ತಿಳಿಸಿದ್ದಾರೆ. ಕೆಲವು ಕಡೆ ಟ್ರಾಫಿಕ್ ಪೊಲೀಸರಿಗೂ ಟಿಂಟೆಡ್ ಗ್ಲಾಸ್ ತೆಗೆಸದ ಕಾರು ಮಾಲಿಕರಿಗೂ ಬಾಯಿ ಮಾತಿನ ಜಗಳ ನಡೆಯುತ್ತಿತ್ತು.
ಹಳೆಯ ಮಾರುತಿ 800, ಆಲ್ಟೊ ಮುಂತಾದ ಕಾರುಗಳನ್ನು ಹೊಂದಿರುವ ಗ್ರಾಹಕರು ರಸ್ತೆ ಬದಿಯಲ್ಲೇ ಕಾರು ನಿಲ್ಲಿಸಿ ತಾವೇ ಟಿಂಟೆಡ್ ಗ್ಲಾಸ್ ಕಿತ್ತು ತೆಗೆಯುತ್ತಿದ್ದರು. ಆದರೆ ಈ ರೀತಿ ತೆಗೆಯುವುದು ಹೆಚ್ಚು ಕಷ್ಟವೆಂದು ಕೆಲವರಿಗೆ ಅನಿಸಿರಬಹುದು. (ಟಿಪ್ಸ್: ನೀವೇ ಬಣ್ಣದ ಕಾಗದ ಕಿತ್ತು ತೆಗೆಯಿರಿ)
ಕೆಲವು ಕಡೆ ನಿನ್ನೆ ಟ್ರಾಫಿಕ್ ಪೊಲೀಸರು ಟಿಂಟೆಡ್ ಗ್ಲಾಸ್ ತೆಗೆಯದ ಕಾರು, ಕ್ಯಾಬ್ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿಲ್ಲ. ಆದರೆ ಇಂದಿನಿಂದ(ಬುಧವಾರ) ಯಾವುದೇ ವಿನಾಯಿತಿ ನೀಡದೇ ಟಿಂಟೆಡ್ ಗ್ಲಾಸ್ ತೆಗೆಯದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ದಂಡ: ಮೊದಲ ಬಾರಿಗೆ ಟಿಂಟೆಡ್ ಗ್ಲಾಸ್ ತೆಗೆಯದೇ ಸಿಕ್ಕಿಬಿದ್ದವರಿಗೆ 100 ರುಪಾಯಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಎರಡನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ಮತ್ತು ಮೂರನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ವಿಧಿಸಿ ಚಾಲನಾ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಾಹನಗಳ ಮುಂಭಾಗದ ಮತ್ತು ಹಿಂಭಾಗದ ಕಿಟಕಿಗಳಲ್ಲಿ ಶೇಕಡ 70ರಷ್ಟು ವೀಕ್ಷಣೆ ಸಾಧ್ಯವಿರಬೇಕು. ಸೈಡ್ ಕಿಟಕಿಗಳಲ್ಲಿ ಕನಿಷ್ಠ ಶೇಕಡ 50ರಷ್ಟು ವೀಕ್ಷಣೆ ಸಾಧ್ಯವಿರಬೇಕು ಎಂದು 1989ರ ವಾಹನ ಕಾಯಿದೆಯಲ್ಲಿ ತಿಳಿಸಲಾಗಿದೆ. ಇದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಿಯ ಆಡಳಿತ ಪ್ರದೇಶಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಕೋರ್ಟ್ ಇತ್ತೀಚೆಗೆ ಆದೇಶಿಸಿದೆ.


Click it and Unblock the Notifications









