ಕಾಮಿರೊನ್ ಡ್ರೈವ್ ಮಾಡಿದ ಕಾರಿಗೆ 50 ಲಕ್ಷ ಡಾಲರ್!
ಇಂಗ್ಲಿಷ್ ಸಿನಿಮಾ ವೀಕ್ಷಕರಿಗೆ ಕಾಮಿರೊನ್ ಡಿಯಾಝ್ ಗೊತ್ತಿರಬಹುದು. ಹೆಚ್ಚಿನ ಪಡ್ಡೆ ಹುಡುಗರು ಈಕೆಯನ್ನು ಪ್ರೀತಿಯಿಂದ ಮನಸ್ಸಿನಲ್ಲಿಯೇ ಕಾಮಿ ಎಂದು ಸ್ಮರಿಸುವುದುಂಟು. ಅಮೆರಿಕದ ಚಿತ್ರನಟಿ ಮತ್ತು ಮಾಜಿ ರೂಪದರ್ಶಿ ಕಾಮಿರೊನ್ "ದಿ ಮಾಸ್ಕ್", "ಮೈ ಬೆಸ್ಟ್ ಫ್ರೆಂಡ್ ವೆಡ್ಡಿಂಗ್" "ಚಾರ್ಲಿಸ್ ಏಂಜೆಲ್ಸ್" ಸೇರಿದಂತೆ ಲೆಕ್ಕವಿಲ್ಲದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಆಕೆ ನಟಿಸಿದ್ದ ಚಾರ್ಲಿಸ್ ಏಂಜೆಲ್ಸ್ ಚಿತ್ರವು ಹೆಚ್ಚು ಜನಪ್ರಿಯಗೊಂಡಿತ್ತು. ಅದೇ ಚಾರ್ಲಿಸ್ ಏಂಜೆಲ್ಸ್ ಚಿತ್ರದಲ್ಲಿ ಜಗತ್ತಿನ ಸುಂದರವಾದ ಕಾರೊಂದನ್ನು ಕಾಮಿರೊನ್ ಡ್ರೈವ್ ಮಾಡಿದ್ದರು. ಇದೀಗ ಈ ಕಾರನ್ನು 50 ಲಕ್ಷ ಡಾಲರಿಗೆ ಮಾರಾಟಕ್ಕಿಡಲಾಗಿದೆ. ಈ ದರದಿಂದಾಗಿ ಇದು ಜಗತ್ತಿನಲ್ಲಿಯೇ ಅತ್ಯಂತ ದುಬಾರಿ ಕಾರೆಂಬ ಖ್ಯಾತಿಗೆ ಪಾತ್ರವಾಗಿದೆ.
1963ರಲ್ಲಿ ನಿರ್ಮಿಸಿದ ಈ ಕಾರಿನ ಹೆಸರು ಫೆರಾರಿ 250 ಜಿಟಿ ಎಸ್ ಡಬ್ಲ್ಯುಬಿ ಕ್ಯಾಲಿಫೋರ್ನಿಯಾ ಸ್ಪೈಡರ್. ಇದನ್ನು ಆಸ್ಕಟ್ ಮೂಲದ ಪುರಾತನ ಟಲಕ್ರೆಸ್ಟ್ ಎಂಜಿನಿಯರಿಂಗ್ ಕಂಪನಿಯು ಮಾರಾಟಕ್ಕಿಟ್ಟಿದೆ. ಈಗಲೂ ಈ ಕಾರಿನ ಕಾರ್ಯಕ್ಷಮತೆ ಮತ್ತು ಸೌಂದರ್ಯಕ್ಕೆ ಮುಕ್ಕಾಗಿಲ್ಲ. ಹೀಗಾಗಿ ಈ ದುಬಾರಿ ಮೊತ್ತಕ್ಕೆ ಮಾರಾಟಕ್ಕಿಡಲಾಗಿದೆ.
ಸುಮಾರು 50 ಲಕ್ಷ ಡಾಲರ್ ಫಾವತಿಸಿ ಕ್ಯಾಮರಾನ್ ಬಳಸಿದ್ದ ಈ ಕಾರನ್ನು ಖರೀದಿಸಬಹುದು. ಇದೇ ದರಕ್ಕೆ ಹತ್ತಾರು ಬಂಗಲೆ, 28ಕ್ಕೂ ಹೆಚ್ಚು ಫೆರಾರಿ 458 ಕಾರು ಅಥವಾ ಸೆಕೆಂಡ್ ಹ್ಯಾಂಡ್ ಜೆಟ್ ವಿಮಾನ ಖರೀದಿಸಬಹುದು.
ಕಂಪನಿಯು ಕೇವಲ 55 ಫೆರಾರಿ 250 ಜಿಟಿ ಕಾರುಗಳನ್ನು ಮಾತ್ರ ಉತ್ಪಾದಿಸಿತ್ತು. ಇದರಲ್ಲಿ ಈ ಕಾರಿನ ಸಂಖ್ಯೆ 53. ಸಿನಿಮಾದಲ್ಲಿ ಬಳಕೆ ಮಾಡಿದಾಗ ಇದರ ಬಣ್ಣ ಗ್ರೇವಿಯಾಗಿತ್ತು. ನಂತರ ಅದಕ್ಕೆ ಕೆಂಪು ಪೇಂಟ್ ಮಾಡಲಾಗಿತ್ತು. ಈಗ ಮತ್ತೆ ಒರಿಜಿನಲ್ ಬಣ್ಣವನ್ನೇ ನೀಡಲಾಗಿದೆ.
ಆಕರ್ಷಕ ವಿನ್ಯಾಸದ ಈ ವಿಂಟೇಜ್ ಫೆರಾರಿ 3 ಲೀಟರಿನ ವಿ12 ಎಂಜಿನ್ ಹೊಂದಿದೆ. ಇದು 280 ಅಶ್ವಶಕ್ತಿ ನೀಡುತ್ತದೆ. ವಿಶೇಷವೆಂದರೆ ಮುಂದಿನ 50 ವರ್ಷದವರೆಗೆ ಈ ಕಾರು ಬಾಳಿಕೆ ಬರಬಹುದಂತೆ. 1963ರಲ್ಲಿ ಅಭಿವೃದ್ಧಿಪಡಿಸಿದ ಈ ಕಾರು ವಿಶ್ವದ ಅತ್ಯಂತ ಸುಂದರ ಕಾರುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ಈ ಕಾರು ನಾಲ್ಕು ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ. ಕೇವಲ 8 ಸೆಕೆಂಡಿನಲ್ಲಿ 0 ಯಿಂದ 60 ಕಿ.ಮೀ. ವೇಗ ಪಡೆಯಬಹುದಾಗಿದೆ. ಈ ಕಾರಿನಲ್ಲಿ ಗಂಟೆಗೆ 149 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ
ಕಾಮಿರೊನ್ ಡಿಯಾಝ್ ಬಗ್ಗೆ: ಈಕೆ ತನ್ನ ಹದಿನಾರನೇ ವಯಸ್ಸಿನಲ್ಲಿ ಫ್ಯಾಷನ್ ರೂಪದರ್ಶಿಯಾಗಿ ಕರಿಯರ್ ಆರಂಭಿಸಿದ್ದಳು. ಮುಂದಿನ ಕೆಲವೇ ವರ್ಷಗಳಲ್ಲಿ ಜಗತ್ತಿನ ಪ್ರಮುಖ ಕಂಪನಿಗಳಿಗೆಲ್ಲ ರೂಪದರ್ಶಿಯಾಗಿ ಜನಪ್ರಿಯಗೊಂಡಳು. ನಂತರ ಆಕೆ ಚಿತ್ರನಟಿಯಾಗಿ ಜನರ ಹೃದಯದ ಬಡಿತ ಹೆಚ್ಚಿಸಿದಳು. ಹೃದಯದ ಬಡಿತ ಹೆಚ್ಚಿಸುವುದಕ್ಕೆ ಸಾಕ್ಷಿ ಹೇಳಲು ಆಕೆಯ ಒಂದು ಭಾವಚಿತ್ರವನ್ನು ಫೆರಾರಿ ಕಾರಿನೊಂದಿಗೆ ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ.


Click it and Unblock the Notifications









