ಗ್ರಾಹಕನಿಗೆ ಡಬ್ಬಾ ಕಾರು ಕೊಟ್ಟ ಫೋರ್ಡಿಗೆ ಕೋರ್ಟ್ ದಂಡ

ತಮಿಳುನಾಡು ಮೂಲದ ಫೋರ್ಡ್ ಇಂಡಿಯಾ ಕಂಪನಿಯು ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ದೆಹಲಿ ಗ್ರಾಹಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ದೆಹಲಿ ಗ್ರಾಹಕ ನ್ಯಾಯಾಲಯ ಕೂಡ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು, ಗ್ರಾಹಕನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
"ದೋಷಪೂರಿತ ವಾಹನ ನೀಡಿದ್ದು ಕಂಪನಿಯ ತಪ್ಪು. ಖರೀದಿದಾರನಿಗೆ ನೀಡಿರುವ ಕಾರು ಹಲವು ಬಾರಿ ತೊಂದರೆಗೊಳಗಾಗಿತ್ತು ಎನ್ನುವುದು ಖಾತ್ರಿಯಾಗಿದೆ" ಎಂದು ಗ್ರಾಹಕ ನ್ಯಾಯಾಲಯದ ಮುಖ್ಯಸ್ಥ ಬರ್ಕತ್ ಆಲಿ ಝೈದಿ ಹೇಳಿದ್ದಾರೆ.
2004ರ ಡಿಸೆಂಬರ್ ಏಳರಂದು ರಘುನಾಥನ್ 4.95 ಲಕ್ಷ ರು. ನೀಡಿ ಫೋರ್ಡ್ ಕಾರನ್ನು ಖರೀದಿಸಿದ್ದರು. ಖರೀದಿಸಿದ ದಿನವೇ ಸೆಂಟ್ರಲ್ ಲಾಕಿಂಗ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲವೆಂಬ ಅಂಶ ಅವರ ಗಮನಕ್ಕೆ ಬಂತು. ತಕ್ಷಣ ದೆಹಲಿ ಡೀಲರ್ ಬಳಿಗೆ ಬಂದ ರಘುನಾಥನ್ ಗೆ ಇದು ಮೆಕಾನಿಕ್ ಸಮಸ್ಯೆ ಎಂದು ಡೀಲರ್ ತಿಳಿಸಿದರು.
ಕಾರು ಖರೀದಿಸಿದ ಒಂದೇ ತಿಂಗಳಲ್ಲಿ ಕಾರಿನ ಬ್ರೇಕ್ ಸಂಬಂಧಿತ ಸಮಸ್ಯೆ ಕಂಡುಬಂದಿತ್ತು. ಅದನ್ನು ಕೂಡ ಕಾರು ಡೀಲರ್ ಸರಿಪಡಿಸಿಕೊಟ್ಟ. ಅದೇ ತಿಂಗಳು ಕಾರಿನಲ್ಲಿ ಇನ್ನೊಂದು ಸಮಸ್ಯೆ ಕಂಡು ಬಂತು. ಏಪ್ರಿಲ್ 2005ರಂದು ಹಿಂಭಾಗದ ಸೈಡ್ ಗ್ಲಾಸ್ ಕೆಳಗೆ ಬಿತ್ತು. ಗುಣಮಟ್ಟದ ಗ್ಲಾಸ್ ಅಳವಡಿಸದೇ ಇದ್ದದ್ದು ಇದಕ್ಕೆ ಕಾರಣ.
ಕಂಪನಿಯು ನೀಡಿದ ಕಾರು ದೋಷಪೂರಿತವಾಗಿದೆ ಎಂದು ರಘುನಾಥನ್ ಜಿಲ್ಲ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಕಾರಿನ ಮೌಲ್ಯ ಅಥವಾ ಬೇರೆ ಹೊಸ ಕಾರು ನೀಡಬೇಕೆಂದು ಕಂಪನಿಯ ವಿರುದ್ಧ ದೂರು ಸಲ್ಲಿಸಲಾಗಿತ್ತು.


Click it and Unblock the Notifications








