ಮಾರುತಿ ಸುಜುಕಿಗೆ ಫಿಯೆಟ್ ಡೀಸೆಲ್ ಶಕ್ತಿ!!

ಹೆಚ್ಚು ಇಂಧನ ದಕ್ಷತೆಯ ಮಲ್ಟಿಜೆಟ್ ಡೀಸೆಲ್ ಎಂಜಿನ್ ಪೂರೈಸುವ ಕುರಿತು ಮಾರುತಿ ಸುಜುಕಿಯೊಂದಿಗೆ ಫಿಯೆಟ್ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಒಪ್ಪಂದದ ಪ್ರಕಾರ ಫಿಯೆಟ್ ಕಂಪನಿಯು ವರ್ಷಕ್ಕೆ ಒಂದು ಲಕ್ಷ ಡೀಸೆಲ್ ಎಂಜಿನ್ ಗಳನ್ನು ಮಾರುತಿ ಸುಜುಕಿಗೆ ಪೂರೈಸಬೇಕಿದೆ. ಒಂದು ಮೂಲದ ಪ್ರಕಾರ ಫಿಯೆಟ್ ಕಂಪನಿಯು ಈಗಾಗಲೇ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಆರಂಭಿಸಿದೆ.
ಕಂಪನಿಯು ಶೀಘ್ರದಲ್ಲಿ ಎಂಜಿನ್ ಪೂರೈಸಲು ಆರಂಭಿಸುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಸ್ವಿಫ್ಟ್ ಕಾರುಗಳ ಉತ್ಪಾದನೆ ಹಿನ್ನಡೆ ಅನುಭವಿಸುತ್ತಿತ್ತು. ಫಿಯೆಟ್ ಡೀಸೆಲ್ ಎಂಜಿನ್ ಪೂರೈಸಿದ ನಂತರ ಸ್ವಿಫ್ಟ್ ವೇಟಿಂಗ್ ಅವಧಿ ಕಡಿಮೆಯಾಗುವ ನಿರೀಕ್ಷೆಯಿದೆ.
ಮತ್ತೊಂದು ವಿಷಯವೆಂದರೆ ಡಿಸೆಂಬರ್ ತಿಂಗಳಲ್ಲಿ ಕಂಪನಿಯು ನೂತನ ಡಿಜೈರ್ ಹೊರತರಲಿದೆ. ಇದರಿಂದ ಸ್ವಿಫ್ಟ್ ಕಾರಿನ ಪೂರೈಕೆ ಹೆಚ್ಚಿಸಬೇಕಾದ ಅನಿವಾರ್ಯತೆಯೂ ಕಂಪನಿಗಿದೆ. ಯಾಕೆಂದರೆ ನೂತನ ಸ್ವಿಫ್ಟ್ ಡಿಜೈರ್ ಕೂಡ 1.3 ಲೀಟರಿನ ಮಲ್ಟಿಜೆಟ್ ಡೀಸೆಲ್ ಹೊಂದಿದೆ.
ಈ ಹಿಂದೆಯೇ ಫಿಯೆಟ್ ನಿಂದ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಎಂಜಿನ್ ಪಡೆಯುವ ಕುರಿತು ಮಾತುಕತೆಗಳು ನಡೆದಿದ್ದವು. ಆದರೆ ಕಂಪನಿಗಳೆರಡರ ನಡುವೆ ಡೀಸೆಲ್ ಎಂಜಿನ್ ದರದ ಕುರಿತು ಕೊಂಚ ಮಾತುಕತೆಗಳಾಗಿದ್ದವು.
ಇದೀಗ ಅಂತಿಮವಾಗಿ ಡೀಲ್ ಕುದುರಿದೆ. ಸ್ವಿಫ್ಟ್ ಗ್ರಾಹಕರ ನಿರೀಕ್ಷೆಯೂ ಗರಿಗೆದರಿದೆ. ಇದರೊಂದಿಗೆ ಮಾರುತಿ ಸುಜುಕಿ ಕಂಪನಿಯು ಫೆಬ್ರವರಿ ತಿಂಗಳಿನಿಂದ ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನೂ ಹೆಚ್ಚಿಸಲಿದೆ.


Click it and Unblock the Notifications








