ಐದು ಬಾಗಿಲಿನ ಸ್ವಿಫ್ಟ್ ಸ್ಪೋರ್ಟ್ ಕಾರು ಯಾವಾಗ ಬರುತ್ತೆ?

ಯುರೋಪ್ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಸ್ಪೋರ್ಟ್ ಕಾರು ಮೂರು ಬಾಗಿಲಿನ ಕಾರು. ಇದೀಗ ಕಂಪನಿಯು ಸ್ವಿಫ್ಟ್ ಕಾರನ್ನು ಆಸ್ಟ್ರೇಲಿಯಾಕ್ಕೂ ರಫ್ತು ಮಾಡಲು ಆರಂಭಿಸಿದೆ. ಆದರೆ ಕಂಪನಿಯು ಈಗ ಐದು ಬಾಗಿಲಿನ ಸ್ಪೋರ್ಟ್ ಕಾರನ್ನು ಕೂಡ ಪರಿಚಯಿಸಲು ಯೋಜಿಸಿದೆಯಂತೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಐದು ಡೋರಿನ ಸ್ವಿಫ್ಟ್ ಸ್ಪೋರ್ಟ್ ಕಾರು ಕುರಿತು ಜಾಹೀರಾತು ನೀಡಲು ಕೂಡ ಕಂಪನಿ ಆರಂಭಿಸಿದೆ.
ನೂತನ ಐದು ಡೋರಿನ ಸ್ವಿಫ್ಟ್ ಸ್ಪೋರ್ಟ್ ಹೆಚ್ಚು ಶಕ್ತಿಶಾಲಿ, ಅತ್ಯಧಿಕ ಇಂಧನ ದಕ್ಷತೆ ಮತ್ತು ಅನನ್ಯ ಹ್ಯಾಂಡ್ಲಿಂಗ್ ಫೀಚರ್ಸ್ ಹೊಂದಿದೆ ಎಂದು ಕಂಪನಿ ಹೇಳಿದೆ. ಐದು ಡೋರಿನ ಸ್ವಿಫ್ಟ್ ಕಾರು 1.6 ಲೀಟರಿನ ಎಂಜಿನ್ ಹೊಂದಿದೆ. ಇದು 6 ಸ್ಪೀಡ್ ಮ್ಯಾನುಯಲ್ ಅಥವಾ ಏಳು ಸ್ಪೀಡಿನ ಸಿಟಿ ಗೇರ್ ಬಾಕ್ಸ್ ಹೊಂದಿದೆ. ಇದು 135 ಹಾರ್ಸ್ ಪವರ್ ಮತ್ತು 160ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇಂತಹ ಪವರ್ ಇರೋ ಕಾರು 8.1 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯುತ್ತದೆ.
ನೂತನ ಕಾರಿಗೆ ಕಂಪನಿಯು ಕೀಲೆಸ್ ಎಂಟ್ರಿ ಮತ್ತು ಸ್ಟಾರ್ಟ್, ಬ್ಲೂಟೂಥ್ ಫೋನ್ ಮತ್ತು ಆಡಿಯೋ ಸ್ಟ್ರೀಮಿಂಗ್, ಯುಎಸ್ ಬಿ ಕನೆಕ್ಟಿವಿಟಿ, ಆರು ಸ್ಪೀಕರಿನ ಆಡಿಯೋ ಸಿಸ್ಟಮ್ ಮತ್ತು ಏರ್ ಕಂಡಿಷನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ ಇತ್ಯಾದಿ ನೂತನ ಆರಾಮದಾಯಕತೆ ಫೀಚರುಗಳನ್ನು ಅಳವಡಿಸಿದೆ. ಕಾರ್ಯಕ್ಷಮತೆ ಹೆಚ್ಚಾಗಲು ಕಾರಿನ ತೂಕವನ್ನು 30 ಕೆ.ಜಿಯಷ್ಟು ಕಡಿಮೆ ಮಾಡಲಾಗಿದೆ.
ಇದು ಅತ್ಯಧಿಕ ಕಾರ್ಯಕ್ಷಮತೆಯ ಕಾರಾಗಿರುವ ಕಾರಣದಿಂದ ಕಂಪನಿಯು ಇದಕ್ಕೆ ಶಕ್ತಿಶಾಲಿ ಬ್ರೇಕ್, ಎಬಿಎಸ್, ಇಬಿಡಿ ಮತ್ತು ಇಎಸ್ ಪಿ ಸ್ಟಾಂಡರ್ಡ್ ಫೀಚರುಗಳನ್ನು ಅಳವಡಿಸಿದೆ. ಐದು ಡೋರಿನ ಸ್ವಿಫ್ಟ್ ದರ ಸುಮಾರು 23,990 ಡಾಲರ್(12.6 ಲಕ್ಷ ರು.) ಆಸುಪಾಸಿನಲ್ಲಿರಲಿದೆ. ಈ ಕಾರು ಭಾರತದ ರಸ್ತೆಗೆ ಇಳಿಯುವ ಯಾವುದೇ ಸೂಚನೆ ಇಲ್ಲಿವರೆಗೆ ದೊರಕಿಲ್ಲ ಎನ್ನುವುದು ಸ್ವಿಫ್ಟ್ ಪ್ರೀಯರಿಗೆ ಕೊಂಚ ನಿರಾಶೆಯಾಗುವ ಸುದ್ದಿ.


Click it and Unblock the Notifications








