ಎಕೊಸ್ಪೋರ್ಟ್ ಟೆಸ್ಟ್ ನಡೆಯುತ್ತಿದೆ, ರಸ್ತೆಗೆ ಯಾವಾಗ?
ಪ್ರಸಕ್ತ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಫೋರ್ಡ್ ಕಂಪನಿಯು ನೂತನ ಎಕೊಸ್ಪೋರ್ಟ್ ಅನಾವರಣ ಮಾಡಿತ್ತು. ನೂತನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ರಸ್ತೆಗೆ ಆಗಮಿಸುವ ದಿನಾಂಕದ ಕುರಿತು ಅಂದಿನಿಂದ ವದಂತಿಗಳು ಆರಂಭವಾಗಿದ್ದವು. ಇದೀಗ ಕಂಪನಿಯು ನೂತನ ಎಕೊಸ್ಪೋರ್ಟ್ ಟೆಸ್ಟ್ ಮಾಡುತ್ತಿದ್ದು, ಪ್ರಸಕ್ತ ವರ್ಷದ ಅಂತ್ಯದೊಳಗೆ ದೇಶದ ರಸ್ತೆಗೆ ಆಗಮಿಸುವ ನಿರೀಕ್ಷೆಯಿದೆ.
ಒಟ್ಟಾರೆ ಕಂಪನಿಯು ನೂತನ ಎಕೊಸ್ಪೋರ್ಟ್ ಕಾರನ್ನು ಶೀಘ್ರದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. 5 ಸೀಟಿನ ಫೋರ್ಟ್ ಎಕೊಸ್ಪೋರ್ಟ್ ಕಾರನ್ನು ಕಂಪನಿಯು ಫಿಯೆಸ್ಟಾ ಸೆಡಾನ್ ಪ್ಲಾಟ್ ಫಾರ್ಮಿನಲ್ಲೇ ನಿರ್ಮಿಸಿದೆ. ಕಂಪನಿಯು ಪ್ರೀಮಿಯಂ ಕಾರುಗಳಲ್ಲಿರುವ ಅಡ್ವಾನ್ಸ್ ತಂತ್ರಜ್ಞಾನದಲ್ಲಿ ನೂತನ ಎಕೊಸ್ಪೋರ್ಟ್ ನಿರ್ಮಿಸಲಿದೆ. ಆದರೆ ಇದು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕಲಿದೆ.
ನೂತನ ಫೋರ್ಟ್ ಎಕೊಸ್ಪೋರ್ಟ್ ಕಾರು ಸಾಂಪ್ರದಾಯಿಕ 1.6 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿದೆ. ಆದರೆ ಈ ಎಂಜಿನ್ ಹಲವು ಅಡ್ವಾನ್ಸಡ್ ತಂತ್ರಜ್ಞಾನಗಳೊಂದಿಗೆ ಬಂದಿರುವುದರಿಂದ ಶೇಕಡ 20ರಷ್ಟು ಕಡಿಮೆ ಇಂಧನ ಬಳಸುತ್ತದೆ.
ಫೋರ್ಡ್ ಎಕೊಸ್ಪೋರ್ಟ್ ದರ ಫಿಯೆಸ್ಟಾ ಸೆಡಾನ್ ದರದ ಆಸುಪಾಸಿನಲ್ಲಿರಲಿದೆ. ಒಂದು ಮೂಲದ ಪ್ರಕಾರ ಎಕೊಸ್ಪೋರ್ಟ್ ದರ ಸುಮಾರು 10 ಲಕ್ಷ ರುಪಾಯಿ ಇರಲಿದೆ. ಫೋರ್ಡ್ ಎಕೊಸ್ಪೋರ್ಟ್ ಕಾರು ನಾಲ್ಕು ಮೀಟರಿಗಿಂತ ಕಡಿಮೆ ಉದ್ದವಿರಲಿದೆ. ಇದರಿಂದ ಇದರ ದರ ಕಡಿಮೆಯಾಗುವ ನಿರೀಕ್ಷೆಯಿದೆ.
ಕಂಪನಿಯು ಚೆನ್ನೈ ಘಟಕಕ್ಕೆ ಸುಮಾರು 750 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ ಎಂದು ವರದಿಗಳು ಹೇಳಿವೆ. ಕಂಪನಿಯು ಈ ವರ್ಷದಿಂದಲೇ ಚೆನ್ನೈ ಘಟಕದಲ್ಲಿ ಎಕೊಸ್ಪೋರ್ಟ್ ಉತ್ಪಾದನೆ ಆರಂಭಿಸಲಿದೆ. ಮುಂದಿನ ವರ್ಷದ ಆರಂಭದಿಂದಲೇ ರಸ್ತೆಯಲ್ಲಿ ಎಕೊಸ್ಪೋರ್ಟ್ ಮೋಡಿ ಮಾಡುವ ನಿರೀಕ್ಷೆಯಿದೆ.


Click it and Unblock the Notifications









