ಫೇಸ್‌ಬುಕ್ ಜೊತೆ ಟೂ ಬಿಟ್ಟ ಜನರಲ್ ಮೋಟರ್ಸ್
ಅಮೆರಿಕದ ವಾಹನ ತಯಾರಿಕಾ ಕಂಪನಿಯು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡುವುದನ್ನು ನಿಲ್ಲಿಸಲು ಯೋಜಿಸಿದೆ. ಹಣ ಪಾವತಿಸಿ ಪ್ರಕಟಿಸುವ ಈ ಜಾಹೀರಾತುಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲವೆಂಬ ಅನಿಸಿಕೆಯಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದೆ.
ಫೇಸ್‌ಬುಕ್ ಕಂಪನಿಯು ಆರಂಭಿಕ ಷೇರು ವಿತರಣೆ(ಐಪಿಒ) ಬಿಡುಗಡೆ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿರುವುದು ವಿಶೇಷವಾಗಿದೆ. ಅಮೆರಿಕದಲ್ಲಿ ಜನರಲ್ ಮೋಟರ್ಸ್ ಕಂಪನಿಯು ಮೂರನೇ ಬೃಹತ್ ಜಾಹೀರಾತು ನೀಡುವ ಕಂಪನಿಯಾಗಿದೆ.
ಸಾಂಪ್ರದಾಯಿಕ ಮಾಧ್ಯಮಗಳಿಗೆ ಹೋಲಿಸಿದರೆ ಫೇಸ್ ಬುಕ್ ಜಾಹೀರಾತುಗಳು ಹೆಚ್ಚು ಜನರನ್ನು ಸೆಳೆಯುವ ಕುರಿತು ಕಂಪನಿಗೆ ಸಂಶಯ ಬಂದಿದೆಯಂತೆ. ಆದರೂ ಕಂಪನಿಯು ಫೇಸ್‌ಬುಕ್‌ನ ಉಚಿತ ಪುಟಗಳನ್ನು ಕಾರುಗಳ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ಮುಂದುವರೆಸಲಿದೆ.
ಫೇಸ್‌ಬುಕ್ ಜಾಹೀರಾತುಗಳಿಗೆ ಜನರಲ್ ಮೋಟರ್ಸ್ ಕಂಪನಿಯು ಸುಮಾರು 400 ಕೋಟಿ ಡಾಲರ್ ವೆಚ್ಚ ಮಾಡಿದೆ. ಇದರಲ್ಲಿ ಸುಮಾರು 100 ಕೋಟಿ ಡಾಲರ್ ಪೆಯ್ಡ್ ಜಾಹೀರಾತುಗಳಿಗಾಗಿ ವಿನಿಯೋಗಿಸಲ್ಪಡುತ್ತದೆ ಎಂದು ಕಂಪನಿ ಹೇಳಿದೆ. ಈ ವರ್ಷದ ಆರಂಭದಿಂದ ಕಂಪನಿಯು ಈ ಬೃಹತ್ ಜಾಹೀರಾತು ಕಾರ್ಯತಂತ್ರ ರೂಪಿಸಿತ್ತು.
ಜನರಲ್ ಮೋಟರ್ಸ್ ಕಂಪನಿಯ ಈ ನಿರ್ಧಾರದ ಕುರಿತು ಫೇಸ್‌ಬುಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications









