ಜೈ ಷೆವರ್ಲೆ, ದೇಶಕ್ಕೆ ಇನ್ನಷ್ಟು ಜಿಎಂ ಸಣ್ಣಕಾರುಗಳು
ಜನರಲ್ ಮೋಟರ್ಸ್ ಕಂಪನಿಯು ದೇಶದ ವಾಹನ ಮಾರುಕಟ್ಟೆಗೆ ಆಗಮಿಸಿ ಹದಿನಾರು ವರ್ಷಗಳು ಕಳೆದಿದೆ. ಹೊಸ ಸಣ್ಣಕಾರುಗಳನ್ನು ಪರಿಚಯಿಸುವುದು ಮಾತ್ರವಲ್ಲದೇ ಡೀಲರ್ಷಿಪ್ ಜಾಲ ಮತ್ತು ಸರ್ವಿಸ್ ನೆಟ್ ವರ್ಕ್ ಹೆಚ್ಚಿಸುವ ಯೋಜನೆಯೂ ಕಂಪನಿಗಿದೆ.
"ಮುಖ್ಯವಾಗಿ ಸಣ್ಣಕಾರುಗಳಿಗೆ ಭಾರತ ಪ್ರಮುಖ ಮಾರುಕಟ್ಟೆ. ಹೆಚ್ಚಿನ ಜನರು ಇಲ್ಲಿ ಸಣ್ಣಕಾರು ಹೊಂದಲು ಬಯಸುತ್ತಾರೆ. ಇದಕ್ಕೆ ಪೂರಕವಾಗಿ ಭವಿಷ್ಯದಲ್ಲಿ ಇನ್ನಷ್ಟು ಸಣ್ಣಕಾರುಗಳನ್ನು ಪರಿಚಯಿಸಲಿದ್ದೇವೆ" ಎಂದು ಜನರಲ್ ಮೋಟರ್ಸ್ ಇಂಡಿಯಾ ಅಧ್ಯಕ್ಷ ಮತ್ತು ಎಂಡಿ ಲೊವೆಲ್ ಪಡೊಕ್ ಹೇಳಿದ್ದಾರೆ.
ಸಣ್ಣಕಾರು ಮಾತ್ರವಲ್ಲದೇ ಇಲ್ಲಿನ ಕುಟುಂಬ ಸವಾರಿಗೆ ಸೂಕ್ತವಾಗಿರುವ ಮಲ್ಟಿ ಪರ್ಪೊಸ್ ವೆಹಿಕಲ್(ಎಂಪಿವಿ)ಗಳನ್ನು ಕೂಡ ಪರಿಚಯಿಸಲು ನಿರ್ಧರಿಸಿದೆ. ಪ್ರಸಕ್ತ ವರ್ಷದ ದ್ವಿತೀಯಾರ್ಧದಲ್ಲಿ ಕಂಪನಿಯು ಎರಡು ವಾಹನಗಳನ್ನು ಪರಿಚಯಿಸಲಿದೆಯಂತೆ.
"ಕಂಪನಿಯು ಈ ವರ್ಷ ಪ್ರೀಮಿಯಂ ಹ್ಯಾಚ್ ಬ್ಯಾಕ್ "ಸೈಲ್"(Sail) ಮತ್ತು ಮಲ್ಟಿ ಪರ್ಪೊಸ್ ವ್ಯಾನ್ ಪರಿಚಯಿಸಲಿದೆ. ಇವೆರಡು ವಾಹನಗಳು ಕಂಪನಿಯ ಮಾರುಕಟ್ಟೆ ಹೆಚ್ಚಿಸಲು ನೆರವಾಗುವ ನಿರೀಕ್ಷೆಯಿದೆ" ಎಂದರು.
ಜನರಲ್ ಮೋಟರ್ಸ್ ಕಂಪನಿಯು ದೇಶದಲ್ಲಿ ಷೆವರ್ಲೆ ಬ್ರಾಂಡ್ ಮೂಲಕ ಜನಪ್ರಿಯವಾಗಿದೆ. ಷೆವರ್ಲೆ ಬೀಟ್, ಸ್ಪಾರ್ಕ್ ಕಾರುಗಳು ಅತ್ಯಧಿಕ ಬೇಡಿಕೆಯನ್ನು ಹೊಂದಿವೆ. ಕಂಪನಿಯು ಸೆಡಾನ್ ಕಾರುಗಳಾದ ಓಪ್ಟ್ರಾ, ಕ್ರೂಝ್ ಮತ್ತು ಅವಿಯೊ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯ ಷೆವರ್ಲೆ ತವೆರಾ ಕೂಡ ಜನಪ್ರಿಯ ಎಂಪಿವಿ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









