ಲಕ್ಷ್ಯವಿಟ್ಟು ಕೇಳಿ, ಹೋಂಡಾ ಕಾರುಗಳಿಗೆ ಲಕ್ಷ ಡಿಸ್ಕೌಂಟ್
ಹೋಂಡಾ ಸಿಯೆಲ್ ಕಾರ್ಸ್ ಇಂಡಿಯಾ ಕಂಪನಿಯು ದೇಶದಲ್ಲಿ ಐದು ಲಕ್ಷ ಕಾರುಗಳನ್ನು ಮಾರಾಟ ಮಾಡಿ ಹೊಸ ಮೈಲುಗಲ್ಲು ಸಾಧಿಸಿದೆ. ಇತ್ತೀಚೆಗೆ ಕಂಪನಿಯು ಈ ಸಂಭ್ರಮದ ನೆನಪಿಗೆ ಸಣ್ಣಕಾರುಗಳಿಗೆ ಹೊಸ ಬಣ್ಣ ಬಳಿದು ಸಂಭ್ರಮಿಸಿದೆ. ಕಂಪನಿಯು ಈ ಸಂಭ್ರಮದ ಕ್ಷಣವನ್ನು ಗ್ರಾಹಕರೊಂದಿಗೆ ಆಚರಿಸಲು ನಿರ್ಧರಿಸಿದ್ದು, ತನ್ನ ಕಾರುಗಳಿಗೆ ಭಾರಿ ಪ್ರಮಾಣದಲ್ಲಿ ದರ ವಿನಾಯಿತಿಯನ್ನೂ ಮಾಡಿದೆ.
ವಿಶೇಷವೆಂದರೆ ದೇಶದಲ್ಲಿ ಹೋಂಡಾ ಕಂಪನಿಯು ಡೀಸೆಲ್ ಕಾರುಗಳನ್ನು ಹೊಂದಿಲ್ಲ. ಕಂಪನಿಯು ಕೇವಲ ಪೆಟ್ರೋಲ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಇದೀಗ ದೇಶದಲ್ಲಿ 5 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಸಂಭ್ರಮಕ್ಕೆ ಹಲವು ದರ ವಿನಾಯಿತಿ ಮತ್ತು ಆಫರುಗಳನ್ನು ನೀಡಿದೆ.
ಕಂಪನಿಯು ತನ್ನ ಬ್ರಿಯೊ ಹ್ಯಾಚ್ ಬ್ಯಾಕ್ ಮತ್ತು ಹೋಂಡಾ ಸಿಟಿ, ಸಿವಿಕ್ ಸೆಡಾನ್ ಕಾರುಗಳಿಗೆ ಕೇವಲ ಒಂದು ರುಪಾಯಿಗೆ ವಿಮೆ ನೀಡುವುದಾಗಿ ಪ್ರಕಟಿಸಿದೆ. ಆದರೆ ಕಂಪನಿಯು ಹೋಂಡಾ ಜಾಝ್ ಕಾರಿಗೆ ಯಾವುದೇ ಆಫರ್ ಪ್ರಕಟಿಸಿಲ್ಲ. ಜಾಝ್ ಕಾರುಗಳಿಗೆ ಈಗಲೂ ಗ್ರಾಹಕರಿಂದ ಅತ್ಯುತ್ತಮ ಬೇಡಿಕೆಯಿರುವುದರಿಂದ ಕಂಪನಿ ಯಾವುದೇ ಆಫರ್ ನೀಡಿಲ್ಲವೆಂದು ತಿಳಿದುಕೊಳ್ಳಬಹುದು.
ಇದರೊಂದಿಗೆ ಕಂಪನಿಯು ಹೋಂಡಾ ಬ್ರಿಯ ಮತ್ತು ಸಿಟಿ ಕಾರುಗಳಿಗೆ ವಾರೆಂಟಿಯನ್ನು ಕ್ರಮವಾಗಿ ಮೂರನೇ ವರ್ಷಕ್ಕೆ ಮತ್ತು 4ನೇ ವರ್ಷಕ್ಕೆ ವಿಸ್ತರಿಸಿದೆ. ಜೊತೆಗೆ ಈ ಕಾರುಗಳಿಗೆ 4 ವರ್ಷ ರೋಡ್ ಸೈಡ್ ಅಸಿಸ್ಟೆನ್ಸ್ ನೀಡಲಿದೆ.
ಕಂಪನಿಯು ತನ್ನ ಕಾರುಗಳಿಗೆ ಭಾರಿ ಪ್ರಮಾಣದಲ್ಲಿ ದರ ವಿನಾಯಿತಿ ಮಾಡಿದೆ. ಹೋಂಡಾ ಅಕಾರ್ಡ್ ಕಾರುಗಳಿಗೆ 1.25 ಲಕ್ಷ ರುಪಾಯಿ, ಸಿವಿಕ್ ಕಾರುಗಳಿಗೆ 85 ಸಾವಿರ ರುಪಾಯಿ, ಹೋಂಡಾ ಸಿಟಿಗೆ 35 ಸಾವಿರ ರು, ಬ್ರಿಯೊ ಕಾರಿಗೆ 24 ಸಾವಿರ ರುಪಾಯಿ ದರ ವಿನಾಯಿತಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಕಂಪನಿಯ ವೆಬ್ ಸೈಟ್ ಗೆ ಭೇಟಿ ನೀಡಬಹುದು.
ಹೋಂಡಾ ಕಂಪನಿಯು ಡೀಸೆಲ್ ಕಾರುಗಳ ಅಲಭ್ಯತೆಯಿಂದ ದೇಶದಲ್ಲಿ ಮಾರುಕಟ್ಟೆ ಪಾಲು ಕಳೆದುಕೊಳ್ಳುತ್ತಿದೆ. ಕಂಪನಿಯು ಅರ್ಥ್ ಡ್ರೀಮ್ ಸೀರಿಸ್ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಶೀಘ್ರದಲ್ಲಿ ಕಂಪನಿಯ ಡೀಸೆಲ್ ಕಾರುಗಳು ಆಗಮಿಸುವ ನಿರೀಕ್ಷೆಯಿದೆ.
ಜೊತೆಗೆ ಕಂಪನಿಯು ಬ್ರಿಯೊ ಹ್ಯಾಚ್ ಬ್ಯಾಕ್ ಕಾರಿನ ಡೀಸೆಲ್ ಆವೃತ್ತಿಯನ್ನು ಪ್ರಸಕ್ತ ವರ್ಷ ಪರಿಚಯಿಸುವ ವದಂತಿಗಳಿವೆ. ಹೋಂಡಾ ಮಾತ್ರವಲ್ಲದೇ ಮಾರುತಿ ಸುಜುಕಿ, ಹ್ಯುಂಡೈ ಮೋಟರ್ಸ್ ಮತ್ತು ಜನರಲ್ ಮೋಟರ್ಸ್ ಕಂಪನಿಗಳು ಕೂಡ ಪೆಟ್ರೋಲ್ ಕಾರುಗಳಿಗೆ ಭಾರಿ ಪ್ರಮಾಣದಲ್ಲಿ ದರ ವಿನಾಯಿತಿ ಪ್ರಕಟಿಸಿವೆ.


Click it and Unblock the Notifications









