ದೇಶದಲ್ಲಿ ಪೆಟ್ರೋಲ್ ಕಾರು ಉತ್ಪಾದನೆ ಸ್ಥಗಿತ!
ಇಟಲಿಯ ಕಾರು ತಯಾರಕ ಕಂಪನಿ ಫಿಯೆಟ್ ಕೂಡ ತಿಂಗಳಲ್ಲಿ ಕೆಲವು ದಿನ ತನ್ನ ಘಟಕಕ್ಕೆ ಬಾಗಿಲು ಹಾಕುತ್ತಿದೆ. ಪೆಟ್ರೋಲ್ ಕಾರುಗಳ ಉತ್ಪಾದನೆ ತಗ್ಗಿಸಲು ಕಂಪನಿಯು ಈ ರೀತಿ ಮಾಡುತ್ತಿದೆ. ಮಾರುತಿ ಸುಜುಕಿ ಕೂಡ ಪೆಟ್ರೋಲ್ ಕಾರು ಉತ್ಪಾದನೆ ನಿಲ್ಲಿಸಲು ಯೋಜಿಸಿದ್ದು, ಈ ಸಮಯದಲ್ಲಿ ಘಟಕದ ವಾರ್ಷಿಕ ಮೇಟೆಂನ್ಸ್ ಮಾಡಲು ನಿರ್ಧರಿಸಿದೆ. ಈ ವಾರ ಟಾಟಾ ಮೋಟರ್ಸ್ ತನ್ನ ವಾಣಿಜ್ಯ ವಾಹನಗಳ ಉತ್ಪಾದನೆಯನ್ನು ಮೂರು ದಿನಗಳ ಕಾಲ ನಿಲ್ಲಿಸಲು ನಿರ್ಧರಿಸಿದೆ.
30 ದಿನಗಳ ಕಾಲ ಪೆಟ್ರೋಲ್ ಕಾರು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಟೊಯೊಟಾ ಕಿರ್ಲೊಸ್ಕರ್ ಹೇಳಿದೆ. ಪೆಟ್ರೋಲ್ ಕಾರುಗಳ ಸಂಗ್ರಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. ಮಾರಾಟದಲ್ಲಿ ಇಳಿಕೆ ಕಂಡಿರುವುದರಿಂದ ಹೆಚ್ಚಿನ ಕಂಪನಿಗಳ ಪೆಟ್ರೋಲ್ ಕಾರುಗಳ ಸಂಗ್ರಹ ಹೆಚ್ಚಾಗುತ್ತಿದೆ.
ಫಿಯೆಟ್ ಕಂಪನಿಯ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಫಿಯೆಟ್ ಕಂಪನಿಯು ಬೇಡಿಕೆ ನೋಡಿಕೊಂಡು ಮುಂದಿನ ವಾರದಲ್ಲಿ ಕೆಲವು ದಿನಗಳ ಕಾಲ ಘಟಕ ಮುಚ್ಚಲು ತೀರ್ಮಾನಿಸಿದೆ. ಫಿಯೆಟ್ ಕಂಪನಿಯು ಕಳೆದ ತಿಂಗಳು ಕೇವಲ 1 ಸಾವಿರ ಕಾರು ಉತ್ಪಾದಿಸಿದೆ. ಅಂದರೆ ಶೇಕಡ 50ರಷ್ಟು ಉತ್ಪಾದನೆ ತಗ್ಗಿಸಿದೆ.
ಇದೀಗ ಡೀಸೆಲ್ ಕಾರುಗಳ ಬೇಡಿಕೆಯು ತುಸು ಇಳಿಕೆ ಕಂಡಿದೆ. ಹೀಗಾಗಿ ಟೊಯೊಟಾ ಡೀಸೆಲ್ ಕಾರು ಆವೃತ್ತಿಗಳ ವೇಟಿಂಗ್ ಪಿರೆಯಿಡ್ ಇಳಿಕೆ ಕಾಣುತ್ತಿದೆ. ವಿಶೇಷವೆಂದರೆ ದೇಶದಲ್ಲಿ ವಾಣಿಜ್ಯ ವಾಹನಗಳ ಬೇಡಿಕೆಯೂ ತಗ್ಗುತ್ತಿದೆ. ಟಾಟಾ ಮೋಟರ್ಸ್ ಮೂರು ದಿನಗಳ ಕಾಲ ಪುಣೆ ಘಟಕಕ್ಕೆ ಬಾಗಿಲು ಹಾಕಲು ನಿರ್ಧರಿಸಿದೆ.
ಒಂದೆಡೆ ಕಚ್ಚಾವಸ್ತುಗಳ, ಬಿಡಿಭಾಗಗಳ ದರ ಹೆಚ್ಚಾಗುತ್ತಿದೆ. ಇದರಿಂದ ಕಾರುಗಳ ದರ ಹೆಚ್ಚಿಸುವ ಅನಿವಾರ್ಯತೆಗೆ ಕಾರು ಕಂಪನಿಗಳು ಸಿಲುಕಿವೆ. ಪರಿಣಾಮವಾಗಿ ಪೆಟ್ರೋಲ್ ಕಾರುಗಳ ಬೇಡಿಕೆಯು ಮತ್ತಷ್ಟು ತಗ್ಗಿದೆ. ಹೀಗಾಗಿ ಕಾರು ಕಂಪನಿಗಳು ಅನಿವಾರ್ಯವಾಗಿ ಉತ್ಪಾದನೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿವೆ.
ಪೆಟ್ರೋಲ್ ದರ ಮತ್ತಷ್ಟು ಕಡಿಮೆಯಾದರೆ, ಸಾಲದ ಮೇಲಿನ ಬಡ್ಡಿದರ ಇಳಿಕೆ ಕಂಡರೆ ಮತ್ತೆ ಕಾರು ಮಾರಾಟ ಗರಿಗೆದರುವ ನಿರೀಕ್ಷೆಯಿದೆ.


Click it and Unblock the Notifications









