ಜಾಬ್ರಾ ಡ್ರೈವ್ ಇನ್-ಕಾರ್ ಸ್ಪೀಕರ್ ಫೋನ್: ಹಾಗಂದ್ರೆ ಏನು?
ಕೆಲವೊಮ್ಮೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಫೋನ್ ಕರೆ ಬರುತ್ತದೆ. ಕರೆ ಸ್ವೀಕರಿಸುವುದು ಸಂಚಾರಿ ನಿಯಮಕ್ಕೆ ವಿರುದ್ಧ. ಆದ್ರೆ ಪಕ್ಕದಲ್ಲಿ ನಿಲ್ಲಿಸಿ ಮಾತನಾಡುವಷ್ಟು ವ್ಯವಧಾನ ಹೆಚ್ಚಿನವರಿಗೆ ಇರುವುದಿಲ್ಲ. ಕಾರು ಡ್ರೈವಿಂಗ್ ಮಾಡುತ್ತಲೇ ಫೋನ್‌ನಲ್ಲಿ ಮಾತನಾಡುವ ಅನಿವಾರ್ಯತೆ ಇರುವರಿಗೆ ಸೂಕ್ತವಾದ ಜಾಬ್ರಾ ಡ್ರೈವ್ ಇನ್ ಕಾರ್ ಸ್ಪೀಕರ್ ಫೋನ್ ದೇಶಕ್ಕೆ ಆಗಮಿಸಿದೆ.
ಇದೊಂದು ಸ್ಪೀಕರ್ ಫೋನ್. ಈ ಸಾಧನವನ್ನು ಆನ್ ಮಾಡಿಟ್ಟರೆ ಇದು ನಿಮ್ಮ ಫೋನಿಗೆ ಸಂಪರ್ಕಗೊಳ್ಳುತ್ತದೆ. ಸ್ಟಿಯರಿಂಗ್ ಮತ್ತು ರಸ್ತೆಯ ಮೇಲೆ ಗಮನವಿಟ್ಟುಕೊಂಡೇ ಜಾಬ್ರಾ ಇನ್ ಕಾರ್ ಸ್ಪೀಕರ್ ಫೋನಲ್ಲಿ ಮಾತನಾಡಬಹುದಾಗಿದೆ.

ಈ ಸಾಧನದ ಬಳಕೆ ಸುಲಭ, ಸರಳ ಮತ್ತು ಸುಲಲಿತ. ಇದನ್ನು ಕಾರಿಗೆ ಇನ್‌ಸ್ಟಾಲ್ ಮಾಡುವ ಅಗತ್ಯವಿಲ್ಲ. ಚಾಲಕ ಮಾತ್ರವಲ್ಲದೇ ಕಾರಿನ ಸಹಪ್ರಯಾಣಿಕರು ಈ ಸಾಧನವನ್ನು ಬಳಸಿಕೊಳ್ಳಬಹುದು. ಕಾರು ಚಲಾಯಿಸುವಾಗ ಫೋನ್ ಬಂದರೆ ಇದರಲ್ಲಿ ದೊಡ್ಡದಾಗಿ ಬೀಪ್ ಬೀಪ್ ಸದ್ದು ಬರುತ್ತದೆ. ಸುರಕ್ಷತೆಗೆ ಯಾವುದೇ ಸಮಸ್ಯೆಯಿಲ್ಲದ ಇದರ ಬಟನ್ ಪ್ರೆಸ್ ಮಾಡಿ ಮಾತನಾಡಬಹುದು.
ಆದ್ರೆ ಗುಟ್ಟಿನ ವಿಷ್ಯ ಮಾತನಾಡಲು ಮಾತ್ರ ಈ ಸಾಧನ ಬಳಸಬೇಡಿ. ಯಾಕೆಂದರೆ ಇದು ಸ್ಪೀಕರ್ ಫೋನ್. ಸ್ಪೀಕರಲ್ಲಿ ಸ್ಪಷ್ಟವಾಗಿ ಕಾರಿನೊಳಗಿದ್ದವರಿಗೆಲ್ಲ ಈ ಫೋನ್ ಕರೆ ಕೇಳಿಸಬಹುದು. ಯಾಕೆಂದರೆ ಮನೆಯಿಂದ ಹೆಂಡ್ತಿ ಅಥವಾ ಗೆಳತಿ ಜೋರಾಗಿ ಉಮ್ಮಾ... ಅಂತ ಲೊಚಕ್ಕೆಂದು ಮುತ್ತು ಕೊಟ್ಟರೆ ಅದು ಕಾರಿನೊಳಗೆ ಮಾರ್ಧನಿಸಬಹುದು.
ಇದು ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್(ಡಿಎಸ್‌ಪಿ) ತಂತ್ರಜ್ಞಾನ ಹೊಂದಿದೆ. ಈ ತಂತ್ರಜ್ಞಾನದಿಂದಾಗಿ ಎಕೊ ಅಥವಾ ಕರ್ಕಶ ಸದ್ದಿಗೆ ಕಡಿವಾಣ ಹಾಕಿ ಸುಸ್ಪಷ್ಟವಾಗಿ ಧ್ವನಿ ಆಲಿಸಬಹುದಾಗಿದೆ. ಇದರಲ್ಲಿ ಆಟೋಮ್ಯಾಟಿಕ್ ಸೌಂಡ್ ಕಂಟ್ರೋಲರ್ ಕೂಡ ಇದೆ. ನಿಮ್ಮ ಧ್ವನಿಗೆ ತಕ್ಕಂತೆ ಇದರ ವಾಲ್ಯೂಂ ಸ್ವಯಂಚಾಲಿತವಾಗಿ ಜೋರು ಅಥವಾ ಮೆಲ್ಲ ಆಗುತ್ತದೆ.
ಸಂವಹನ ಫೀಚರು ಮಾತ್ರವಲ್ಲದೇ ನೂತನ ಇನ್ ಕಾರ್ ಸ್ಪೀಕರ್ ಫೋನ್ ಎ2ಡಿಪಿ ತಂತ್ರಜ್ಞಾನ ಹೊಂದಿದೆ. ಇದರಿಂದಾಗಿ ಬ್ಲೂಟೂಥ್ ಸೌಲಭ್ಯವಿರುವ ಎಂಪಿ3 ಪ್ಲೇಯರ್ ಅಥವಾ ಸ್ಮಾರ್ಟ್ ಫೋನ್ ಗಳಲ್ಲಿ ಸಂಗೀತ ಕೇಳಬಹುದು. ಜಿಪಿಎಸ್ ಇತ್ಯಾದಿ ಫೀಚರುಗಳನ್ನು ಬಳಸಿಕೊಳ್ಳಬಹುದಾಗಿದೆ.
ಸದ್ಯಕ್ಕೆ ಇದು ಭಾರತದ ಎಲ್ಲಾ ಕಡೆ ಲಭ್ಯವಿರುವುದು ಡೌಟ್. ಆದರೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಇದನ್ನು ಖರೀದಿಸಬಹುದು. ಇದಕ್ಕಾಗಿ ನೀವು Jabra DRIVE in-car speaker ಅಂತ ನೆಟ್‌ನಲ್ಲಿ ಹುಡುಕಿ. ಒಂದು ವರ್ಷ ವಾರೆಂಟಿ ಇರುವ ಇದರ ದರ: 3,999 ರುಪಾಯಿ.
ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಇಂತಹ ಸಾಧನ ಬಳಸಿ. ಸುರಕ್ಷತೆಯಿಂದ ವಾಹನ ಸವಾರಿ ಮಾಡಿ.


Click it and Unblock the Notifications








