ಎಲೆಕ್ಟ್ರಿಕ್ ರೇವಾ ಖರೀದಿಗೆ SBI ಬಂಪರ್ ಸಾಲದ ಆಫರ್

ಅಂದರೆ ಮಹೀಂದ್ರ ರೇವಾ ಎಲೆಕ್ಟ್ರಿಕ್ ಕಾರಿನ ಆನ್ ರೋಡ್ ದರದ ಶೇಕಡ 85ರಷ್ಟು ಕಾರು ಸಾಲ ನೀಡುವ ಕುರಿತು ಮಹೀಂದ್ರ ಮತ್ತು ಎಸ್ ಬಿಐ ಒಪ್ಪಂದಕ್ಕೆ ಸಹಿ ಹಾಕಿವೆ. ಶೇಕಡ 12ರಷ್ಟು ಬಡ್ಡಿದರದಲ್ಲಿ 7 ವರ್ಷ ಕಾಲಾವಧಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಲ ನೀಡಲಿದೆ. ಈ ಮಾಹಿತಿಯನ್ನು ಕನ್ನಡ ಡ್ರೈವ್ ಸ್ಪಾರ್ಕಿಗೆ ಎಸ್ ಬಿಐ ಮುಂಬೈನ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಆರ್ ಎನ್ ಮೆಹ್ರಾ ನೀಡಿದ್ದಾರೆ.
ನೂತನ ಎಸ್ ಬಿಐ ಆಫರ್ ಪ್ರಕಾರ ಗ್ರಾಹಕರು ಪ್ರತಿಲಕ್ಷ ಸಾಲಕ್ಕೆ ಸುಮಾರು 1,765 ರು. ಇಎಂಐ ಪಾವತಿಸಿದರೆ ಸಾಕು. ಗ್ರಾಹಕರು ಯಾವುದೇ ಸಮಯಕ್ಕೆ ಪೂರ್ಣ ಸಾಲವನ್ನು ಹಿಂತುರುಗಿಸಿದರೆ ಯಾವುದೇ ಪ್ರೀಪೇಮೆಂಟ್ ಶುಲ್ಕ ನೀಡಬೇಕಿಲ್ಲ. ಬ್ಯಾಂಕಿನ ನೂತನ ಆಫರ್ ರೇವಾ ಮಾರಾಟ ಹೆಚ್ಚಳಕ್ಕೆ ನೆರವಾಗುವ ನಿರೀಕ್ಷೆಯಿದೆ.
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಅಂಗ ಸಂಸ್ಥೆಯಾದ ಮಹೀಂದ್ರ ರೇವಾ ಕಾರು ಕಂಪನಿಯು ರೇವಾ ಎಲೆಕ್ಟ್ರಿಕ್ ಕಾರಿನ ಮೂಲಕ ಜನಪ್ರಿಯವಾಗಿದೆ. ಕಂಪನಿಯು ನೂತನ ಎಲೆಕ್ಟ್ರಿಕ್ ಕಾರು ರೇವಾ ಎನ್ಎಕ್ಸ್ಆರ್ ನ್ನು ಪ್ರಸಕ್ತ ವರ್ಷದಲ್ಲಿ ಹೊರತರಲಿದೆ.
ಮಹೀಂದ್ರ ರೇವಾ ಕಂಪನಿಯು ಈಗ ಕೇವಲ ರೇವಾ ಎಂಬ ಒಂದು ಎಲೆಕ್ಟ್ರಿಕ್ ಕಾರನ್ನು ಮಾರಾಟ ಮಾಡುತ್ತಿದೆ. ಇದರ ಬೆಂಗಳೂರು ಎಕ್ಸ್ ಶೋರೂಂ ದರ 2.89 ಲಕ್ಷ ರು.ನಿಂದ 3.97 ಲಕ್ಷ ರು.ವರೆಗಿದೆ. ಕಂಪನಿಯು ಈ ವರ್ಷ ಹೊರತರಲಿರುವ ನೂತನ ರೇವಾ ಎನ್ಎಕ್ಸ್ಆರ್ ದರ ಇದಕ್ಕಿಂತ ಹೆಚ್ಚಿರುವ ನಿರೀಕ್ಷೆಯಿದೆ.
ದೇಶದಲ್ಲಿ ಮಹೀಂದ್ರ ರೇವಾ ಕಂಪನಿಯು ಹೆಚ್ಚು ಶೋರೂಂಗಳನ್ನು ಹೊಂದಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೆಟ್ ವರ್ಕ್ ಗಳನ್ನು ಬಳಸಿಕೊಂಡರೆ ರೇವಾ ಮಾರಾಟ ಹೆಚ್ಚಾಗಬಹುದು. ಎಸ್ ಬಿಐ ಮೂಲಕ ರೇವಾ ಕಾರಿನ ಪ್ರಚಾರವನ್ನು ಕಂಪನಿ ಹೆಚ್ಚಿಸಬಹುದಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








