ಹೊಸ ಮಹೀಂದ್ರ ವೆರಿಟೊ ರಸ್ತೆಗೆ, ದರ 5.27 ಲಕ್ಷ ರು
ಬಹುನಿರೀಕ್ಷಿತ ವೆರಿಟೊ ಪರಿಷ್ಕೃತ ಆವೃತ್ತಿ ದೇಶದ ರಸ್ತೆಗೆ ಆಗಮಿಸಿದೆ. ದೆಹಲಿಯಲ್ಲಿ ನಡೆದ ಸರಳ ಸುಂದರ ಕಾರ್ಯಕ್ರಮದಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ನೂತನ ಕಾರನ್ನು ಈಗಷ್ಟೇ ಅನಾವರಣ ಮಾಡಿದೆ. ಇದರ ಆರಂಭಿಕ ದರ 5.27 ಲಕ್ಷ ರುಪಾಯಿ.
2012ರ ನೂತನ ಮಹೀಂದ್ರ ವೆರಿಟೊ ಬೇಸ್ ಪೆಟ್ರೋಲ್ ಆವೃತ್ತಿ ದರ 5.27 ಲಕ್ಷ ರು. ಮತ್ತು ಬೇಸ್ ಡೀಸೆಲ್ ಆವೃತ್ತಿ ದರ 6.26 ಲಕ್ಷ ರುಪಾಯಿ. ಇದು ಎರಡು ಪೆಟ್ರೋಲ್ ಮತ್ತು ಮೂರು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸೇರಿದಂತೆ ಒಟ್ಟು ಐದು ಆವೃತ್ತಿಗಳಲ್ಲಿ ದೊರಕುತ್ತಿದೆ.
ಕಂಪನಿಯು ಆರಂಭದಲ್ಲಿ ಮಹೀಂದ್ರ ರೆನೊ ಲೊಗಾನ್ ಹೆಸರಿನಲ್ಲಿ ಈ ಕಾರನ್ನು ಮಾರಾಟ ಮಾಡುತ್ತಿತ್ತು. ಆದರೆ ರೆನೊ ಮಹೀಂದ್ರ ಜಂಟಿ ಉದ್ಯಮ ಕೊನೆಗೊಂಡ ನಂತರ ಕಂಪನಿಯು ಈ ಸೆಡಾನ್ ಕಾರಿಗೆ ವೆರಿಟೊ ಎಂದು ನಾಮಕರಣ ಮಾಡಿತ್ತು. ಆದರೆ ವೆರಿಟೊ ಕಾರಲ್ಲಿ ಲೊಗಾನ್ ಬಾಕ್ಸಿ ವಿನ್ಯಾಸ ಮತ್ತು ಟೆಕ್ ವಿಶೇಷಗಳು ಮುಂದುವರೆದಿತ್ತು.
ಹಳೆಯ ವೆರಿಟೊ ಆವೃತ್ತಿಗೆ ಹೋಲಿಸಿದರೆ ನೂತನ ವೆರಿಟೊ ಕಾರಿನ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಮುಂಭಾಗದ ವಿನ್ಯಾಸ ಮತ್ತು ಹೆಡ್ ಲ್ಯಾಂಪ್ ವಿನ್ಯಾಸ ಬದಲಾವಣೆಯಾಗಿದೆ. ಕ್ಷೈಲೊ ಕಾರಿನಿಂದ ಸ್ಪೂರ್ತಿ ಪಡೆದಂತೆ ಮುಂಭಾಗದ ಗ್ರಿಲ್ ಇದೆ. 2012 ವೆರಿಟೊ ಕಾರಿನ ಹಿಂಭಾಗದ ಬೂಟ್ ಹೊಸ ವಿನ್ಯಾಸದಲ್ಲಿ ಬಂದಿದೆ. ಹೊಸ ಫಾಗ್ ಲ್ಯಾಂಪ್ ಅಥವಾ ಮಿಣುಕು ದೀಪ, ಕಪ್ಪು ಬಣ್ಣದ ಬಿ ಪಿಲ್ಲರುಗಳು ಗಮನ ಸೆಳೆಯುತ್ತವೆ.
ಮಹೀಂದ್ರ ಹೊಸ ವೆರಿಟೊ ಮೈಲೇಜ್ ಆಕರ್ಷಕವಾಗಿದೆ. ಡೀಸೆಲ್ ವೆರಿಟೊ ಆವೃತ್ತಿ ಪ್ರತಿಲೀಟರಿಗೆ ಸುಮಾರು 21.03 ಕಿ.ಮೀ. ಮೈಲೇಜ್ ನೀಡುತ್ತದೆ.
2012ರ ನೂತನ ವೆರಿಟೊ ಕಾರಿನಲ್ಲಿ ಹಲವು ಸುರಕ್ಷತೆ ಫೀಚರುಗಳೂ ಇವೆ. ಅಂದ್ರೆ ಇಬಿಡಿ ಜೊತೆ ಎಬಿಎಸ್, ಕಳ್ಳರಿಂದ ಪಾರಾಗಲು ಆ್ಯಂಟಿ ಥೆಪ್ಟ್ ಎಂಜಿನ್ ಇಮೊಬಿಲೈಝರ್, ಡ್ರೈವರ್ ಏರ್ ಬ್ಯಾಗ್ ಮತ್ತು ಸೈಡ್ ಇಂಪ್ಯಾಕ್ಟ್ ಬೀಮ್ಸ್ ಇತ್ಯಾದಿಗಳಿವೆ.
ನೂತನ ವೆರಿಟೊ ಎಂಟು ಬಣ್ಣಗಳಲ್ಲಿ ದೊರಕುತ್ತದೆ. ಡೀಸೆಲ್ ವೆರಿಟೊ 4 ಸಿಲಿಂಡರ್, 8 ಕವಾಟದ 1461ಸಿಸಿ ಎಂಜಿನ್ ಹೊಂದಿದೆ. ಇದು 1.5 ಲೀಟರ್ ಡಿಸಿಐ ಸಿಆರ್ ಡಿಐ ಡೀಸೆಲ್ ಎಂಜಿನ್ ಆಗಿದೆ. ಪೆಟ್ರೋಲ್ ಆವೃತ್ತಿಯು 4 ಸಿಲಿಂಡರ್, 8 ಕವಾಟದ 1390 ಸಿಸಿಯ ಎಂಜಿನ್ ಹೊಂದಿದೆ. ಇದು 1.4 ಲೀಟರಿನ ಎಂಪಿಎಫ್ಐ ಪೆಟ್ರೋಲ್ ಎಂಜಿನ್ ಹೊಂದಿದೆ.
ಇವಿಷ್ಟು ನಮ್ಮ ವರದಿಗಾರರು ದೆಹಲಿಯಿಂದ ಫೋನ್ ಮಾಡಿ ತಿಳಿಸಿದ ಮಾಹಿತಿ. ಸಂಪೂರ್ಣ ವಿಮರ್ಶೆ ಶೀಘ್ರದಲ್ಲಿ ನಿಮ್ಮ ಮುಂದಿರಲಿದೆ. ಧನ್ಯವಾದ.


Click it and Unblock the Notifications









