ಮಾರುತಿ ಹೊಸ ರಿಟ್ಜ್ ಡೀಸೆಲ್ ರಸ್ತೆಗೆ, ದರವೆಷ್ಟು?
ದೇಶದ ಬೃಹತ್ ಪ್ರಯಾಣಿಕ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತರಾತುರಿಯಲ್ಲಿ ರಿಟ್ಜ್ ಸಣ್ಣಕಾರಿನ ಪರಿಷ್ಕೃತ ಆವೃತ್ತಿಗಳನ್ನು ಪರಿಚಯಿಸಿದೆ. ಜೊತೆಗೆ ಹೊಸದಾಗಿ ಟಾಪ್ ಎಂಡ್ ಝಡ್ ಡಿಐ ರಿಟ್ಜ್ ಆವೃತ್ತಿಯನ್ನೂ ಪರಿಚಯಿಸಿದೆ.
ನೂತನ ರಿಟ್ಜ್ ಡೀಸೆಲ್ ಎಂಟ್ರಿ ಲೆವೆಲ್ ಕಾರಿನ ಆರಂಭಿಕ ದರ 5.31 ಲಕ್ಷ ರುಪಾಯಿ. ಹೊಸದಾಗಿ ಪರಿಚಯಿಸಿದ ಹೈ ಎಂಡ್ ಝಡ್ ಡಿಐ ಆವೃತ್ತಿ ದರ 6.23 ಲಕ್ಷ ರುಪಾಯಿ ಆಗಿದೆ. ನೂತನ ಡೀಸೆಲ್ ರಿಟ್ಜ್ ಕಾರಿನ ಮೈಲೇಜ್ ಪ್ರತಿಲೀಟರಿಗೆ 23.2 ಕಿ.ಮೀ. ಎಂದು ಕಂಪನಿ ತಿಳಿಸಿದೆ.
ನೂತನ ರಿಟ್ಜ್ ಡೀಸೆಲ್ ಅತ್ಯುತ್ತಮ ವಿನ್ಯಾಸ, ಅನನ್ಯ ಕಾರ್ಯಕ್ಷಮತೆ ಮತ್ತು ಆಕರ್ಷಕ ಇಂಧನ ದಕ್ಷತೆ ಹೊಂದಿರುವುದಾಗಿ ಮಾರುತಿ ಸುಜುಕಿ ಪ್ರತಿಪಾದಿಸಿದೆ. ಹಳೆಯ ರಿಟ್ಜ್ ಆವೃತ್ತಿಗೆ ಹೋಲಿಸಿದರೆ ನೂತನ ರಿಟ್ಜ್ ಡೀಸೆಲ್ ಕಾರಿನಲ್ಲಿ 52 ಬಗೆಯ ಬದಲಾವಣೆಗಳಾಗಿವೆ ಎಂದು ಕಂಪನಿ ತಿಳಿಸಿದೆ.
ಅಂದರೆ ಹೊರ ವಿನ್ಯಾಸ, ಹೊಸ ಡ್ಯೂಯಲ್ ಟೋನ್ ಇಂಟಿರಿಯರ್, ಹೊಸ ಝಡ್ ಡಿಐ ಆವೃತ್ತಿ, ಮಲ್ಟಿ ಇನ್ಫಾರ್ಮೆಷನ್ ಡಿಸ್ ಪ್ಲೇ, ನೂತನ ಆಡಿಯೊ ಸಿಸ್ಟಮ್ ಇತ್ಯಾದಿ ಹೊಸ ಫೀಚರುಗಳಿವೆ. ಹೊಸ ಝಡ್ ಡಿಐ ಆವೃತ್ತಿಯು ಅಲಾಯ್ ವೀಲ್, ಡ್ಯೂಯಲ್ ಫ್ರಂಟ್ ಏರ್ ಬ್ಯಾಗ್ ಮತ್ತು ಸ್ಟಿಯರಿಂಗ್ ಆಡಿಯೋ ಕಂಟ್ರೋಲ್ ಫೀಚರುಗಳನ್ನು ಹೊಂದಿದೆ.
ಹಳೆಯ ರಿಟ್ಜ್ ಕಾರಿಗೆ ಹೋಲಿಸಿದರೆ ಹೊಸ ಆವೃತ್ತಿಯಲ್ಲಿ ಶೇಕಡ 10ರಷ್ಟು ಮೈಲೇಜ್ ಹೆಚ್ಚಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ನೂತನ ರಿಟ್ಜ್ ಡೀಸೆಲ್ ಕಾರು ಪ್ರತಿಲೀಟರಿಗೆ 23.2 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಹಳೆಯ ರಿಟ್ಜ್ ಪ್ರತಿಲೀಟರಿಗೆ 21.1 ಕಿ.ಮೀ. ಮೈಲೇಜ್ ನೀಡುತ್ತಿತ್ತು.
ಕಳೆದ ವರ್ಷ ರಸ್ತೆಗಿಳಿದ ನೂತನ ಸ್ವಿಫ್ಟ್ ಕಾರಿನ ತಂತ್ರಜ್ಞಾನವನ್ನೇ ನೂತನ ಡೀಸೆಲ್ ಆವೃತ್ತಿಗಳು ಹೊಂದಿದೆ. ಸದ್ಯ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ ದೀಪಾವಳಿಗಿಂತ ಮುನ್ನವೇ ಪರಿಷ್ಕೃತ ಡೀಸೆಲ್ ಆವೃತ್ತಿಗಳನ್ನು ಕಂಪನಿ ಪರಿಚಯಿಸಿದೆ.
ಮಾನೆಸರ್ ಘಟಕದಲ್ಲಿ ಯಾವುದೇ ಗಲಭೆ ನಡೆಯದಿದ್ದರೆ ಕಂಪನಿಯು ರಿಟ್ಜ್ ಕಾರನ್ನು ಅದ್ದೂರಿಯಾಗಿ ಮಾರುಕಟ್ಟೆಗೆ ಪರಿಚಯಿಸುತ್ತಿತ್ತು. ಅಂದರೆ ರಸ್ತೆಗಿಳಿಸುವ ಮುನ್ನವೇ ಬುಕ್ಕಿಂಗ್ ಅವಕಾಶ ನೀಡುತ್ತಿತ್ತು.
ಹೊಸ ರಿಟ್ಜ್ ದರ(ದೆಹಲಿ ಎಕ್ಸ್ ಶೋರೂಂ)
* ಹೊಸ ರಿಟ್ಜ್ ಎಲ್ ಡಿಐ: 5.31 ಲಕ್ಷ ರುಪಾಯಿ.
* ರಿಟ್ಜ್ ವಿಡಿಐ: 5.64 ಲಕ್ಷ ರುಪಾಯಿ.
* ವಿಡಿಐ(ಎಬಿಎಸ್): 5.82 ಲಕ್ಷ ರು.
* ಝಡ್ ಡಿಐ: 6.23 ಲಕ್ಷ ರು.
ರಿಟ್ಜ್ ವಿಮರ್ಶೆ


Click it and Unblock the Notifications









