ವಿಮರ್ಶೆ: 2012ರ ಸ್ವಿಫ್ಟ್ ಡಿಜೈರ್ ಕಾರಲ್ಲಿ ಹೊಸದೇನಿದೆ?

ಸ್ವಿಫ್ಟ್ ಕಾರಿನೊಂದಿಗೆ ನೂತನ ಡಿಜೈರ್ ಯಾವೆಲ್ಲ ಭಿನ್ನತೆ, ಸಾಮ್ಯತೆ ಹೊಂದಿದೆ? ಹೊಸ ಕಾರಲ್ಲಿ ಯಾವೆಲ್ಲ ಬದಲಾವಣೆ, ಮಾರ್ಪಾಡುಗಳಾಗಿವೆ? ಹೊಸ ಡಿಜೈರ್ ಕಾರು ಯಾರಿಗೆ ಸೂಕ್ತ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ವಿಮರ್ಶೆ ಮಾಡಲಾಗಿದೆ.
ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು ಪ್ರೀಮಿಯಮ್ ಕೆಟಗರಿಯಲ್ಲಿ ಬಂದಿತ್ತು. ಆದರೆ ಸ್ವಿಫ್ಟ್ ಡಿಜೈರ್ ಸೆಡಾನ್ ಬಜೆಟ್ ಕಾರು ಅಥವಾ ಅಗ್ಗದ ಕಾರಾಗಿ ಆಗಮಿಸಿದೆ. ಸ್ವಿಫ್ಟ್ ಕಾರಿನ ಹಿಂಭಾಗವನ್ನು ಸೆಡಾನ್ ಆಗಿ ಪರಿವರ್ತಿಸಲಾಗಿದೆ.
ನೂತನ ಸ್ವಿಫ್ಟ್ ಸೆಡಾನ್ ಕಾರಿನ ಉದ್ದ ನಾಲ್ಕು ಮೀಟರಿಗಿಂತ ಕಡಿಮೆ. ಹಳೆಯ ಆವೃತ್ತಿ ನಾಲ್ಕು ಮೀಟರಿಗಿಂತ ಉದ್ದವಿತ್ತು. ಉದ್ದ ಕಡಿಮೆಯಾದ ಕಾರಣ ಬೂಟ್ ಸ್ಥಳಾವಕಾಶ ಕಡಿಮೆಯಾಗಿದೆ. ದರನೂ ಕಡಿಮೆಯಾಗಿದೆ.
ಪ್ರಪ್ರಥಮ ಬಾರಿಗೆ ಸೆಡಾನ್ ಕಾರು ಖರೀದಿಸುವ ಗ್ರಾಹಕರಿಗೆ ಈ ಕಾರು ಹೆಚ್ಚು ಸೂಕ್ತವಾಗಿದೆ. ಇದಕ್ಕೆ ಇದರ ಅಗ್ಗದ ದರ ಪ್ರಮುಖ ಕಾರಣ. ಇದನ್ನು ಪಾರ್ಕಿಂಗ್ ಮಾಡಲು ಹೆಚ್ಚು ಸ್ಥಳಾವಕಾಶವೂ ಬೇಕಿಲ್ಲ.
ಇದರ ಹೆಡ್ ಲ್ಯಾಂಪ್, ಫಾಗ್ ಲ್ಯಾಂಪ್ ಎಲ್ಲವೂ ಸ್ವಿಫ್ಟ್ ಕಾರಿನಿಂದ ಸ್ಪೂರ್ತಿ ಪಡೆದಂತೆ ಕಾಣುತ್ತದೆ. ನೂತನ ಸ್ವಿಫ್ಟ್ ಡಿಜೈರಿನ ಪೆಟ್ರೋಲ್ ಆವೃತ್ತಿಯೊಂದು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ದೊರಕುವುದು ಕೂಡ ಒಂದು ಒಳ್ಳೆಯ ಬೆಳವಣಿಗೆ.
ನೂತನ ಡಿಜೈರ್ 1.2 ಲೀಟರಿನ ಎಂಜಿನ್ ಹೊಂದಿದ್ದು, ಆರು ಸಾವಿರ ಆರ್ಪಿಎಂಗೆ 87 ಪಿಎಸ್ ಪವರ್ ನೀಡುತ್ತದೆ. ಈ ಹಿಂದಿನ ಆವೃತ್ತಿಯು 85 ಪಿಎಸ್ ಪವರ್ ನೀಡುತ್ತಿತ್ತು. ಡೀಸೆಲ್ ಆವೃತ್ತಿಯು ಹಳೆಯ 1.3 ಲೀಟರ್ ಡಿ13ಎ ಎಂಜಿನನ್ನು ಉಳಿಸಿಕೊಂಡಿದೆ. ಹೀಗಾಗಿ ಪವರ್ ವಿಷ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ.
ನೂತನ ಸ್ವಿಫ್ಟ್ ಗೆ ಹೋಲಿಸಿದರೆ ನೂತನ ಡಿಜೈರ್ ಇಂಟಿರಿಯರ್ ವಿನ್ಯಾಸ ಸಂಪೂರ್ಣವಾಗಿ ಬದಲಾಗಿದೆ. ಹೊಸ ವಿನ್ಯಾಸ ಸೇರಿಸುವ ಭರದಲ್ಲಿ ಹಳೆಯ ಡಿಜೈರಿನ ಕೆಲವು ಆಕರ್ಷಕ ಇಂಟಿರಿಯರ್ ವಿನ್ಯಾಸ ಮಿಸ್ ಆಗಿದೆ ಅನ್ನೋದು ಕೂಡ ನಿಜ.
ಒಟ್ಟಾರೆ ನೂತನ ಸ್ವಿಫ್ಟ್ ಡಿಜೈರ್ ಕಾರು ನೂತನ ಸ್ವಿಫ್ಟ್ ಕಾರಿನಂತೆಯೇ ಇದೆ. ಆದರೆ ಸೆಡಾನ್ ಹೆಸರಿಟ್ಟುಕೊಂಡ ಕಾರಣದಿಂದ ಹಿಂಭಾಗ ಉದ್ದವಾಗಿದೆ. ಮೂರು ಬಾಕ್ಸಿನ ಸೆಡಾನ್ ಕಾರಾಗಿರುವ ನೂತನ ಡಿಜೈರ್ ಆರಂಭಿಕ ಸೆಡಾನ್ ಖರೀದಿದಾರರಿಗೆ ಸೂಕ್ತ ಆಯ್ಕೆಯಾಗಿದೆ.


Click it and Unblock the Notifications








