ಮಾನೆಸರ್ ಘಟಕವೆಂಬ ಮಾರುತಿ ಅಗ್ನಿ ಪರ್ವತ
ಮಾರುತಿ ಸುಜುಕಿ ಮಾನೆಸರ್ ಘಟಕದ ಸುಮಾರು 100ರಷ್ಟು ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಘಟಕದ ಸುತ್ತ ಸುಮಾರು 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಮಾರುತಿ ಸುಜುಕಿ ಷೇರುಗಳು ಕುಸಿದಿವೆ. ಮಾರುತಿಗೆ ಮತ್ತೆ ಸಂಕಷ್ಟ ಆರಂಭವಾಗಿದೆ.
ಕಳೆದ ಕೆಲವು ತಿಂಗಳಿನಿಂದ ಮಾರುತಿ ಸುಜುಕಿ ಮಾನೆಸರ್ ಘಟಕವು ಬೂದಿ ಮುಚ್ಚಿದ ಕೆಂಡದಂತೆ ಇದೆ. ಯಾವಾಗ ಏನಾಗುವುದೋ ಆತಂಕ ಅಲ್ಲಿತ್ತು. ಮೊನ್ನೆ ಸೂಪರ್ ವೈಸರ್ ಮತ್ತು ಸಿಬ್ಬಂದಿಯೊಬ್ಬರ ನಡುವೆ ನಡೆದ ಸಣ್ಣಜಗಳವನ್ನು ನೆಪವಾಗಿಟ್ಟುಕೊಂಡು ಎಚ್ಆರ್ ವ್ಯವಸ್ಥಾಪಕರನ್ನೇ ಸುಟ್ಟದ್ದು ದುರಂತ.
ಇತ್ತೀಚೆಗೆ ಮಾರುತಿ ಸುಜುಕಿ ನೌಕರರು ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದರು. ಆದರೆ ಅವರು ಬೇಡಿಕೆಯಿಟ್ಟದ್ದು ಐದು ಪಟ್ಟು ವೇತನ ಹೆಚ್ಚಳ. ಈಗಾಗಲೇ ಸುಮಾರು 18 ಸಾವಿರ ರು ವೇತನ ಪಡೆಯುವ ಖಾಯಂ ನೌಕರರ ವೇತನ ಐದು ಪಟ್ಟು ಹೆಚ್ಚಾದರೆ 90 ಸಾವಿರ ರು.ನಷ್ಟು ವೇತನ ಹೆಚ್ಚಳವಾಗುತ್ತದೆ! ನೌಕರರ ಬೇಡಿಕೆಗೆ ಕಂಪನಿಯು ಮೌನದಿಂದ ಇತ್ತು.
ಮೊನ್ನೆ ನಡೆದದ್ದು ಭೀಕರ ಘಟನೆ. ಕಾರು ಬಿಡಿಭಾಗಗಳಲ್ಲೇ ನೌಕರರು ಆಡಳಿತ ಸಿಬ್ಬಂದಿಗೆ ಹೊಡೆದಿದ್ದರು. ಇದರಿಂದ ನೂರಾರು ಜನರು ಗಾಯಗೊಂಡಿದ್ದಾರೆ. ಮತ್ತೊಂದು ಕಟ್ಟಡಕ್ಕೆ ನೌಕರರು ಬೆಂಕಿ ಹಚ್ಚಿದ್ದಾರೆ. ಅಲ್ಲಿ ಎಚ್ಆರ್ ವ್ಯವಸ್ಥಾಪಕರಿಗೆ ಹೊಡೆದಿದ್ದಾರೆ. ಶೇಕಡ 80ರಷ್ಟು ಸುಟ್ಟಪರಿಸ್ಥಿತಿಯಲ್ಲಿ ಅವರ ಹೆಣವಿತ್ತು.
ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿ ನೌಕರರು ಮತ್ತು ಆಡಳಿತ ಮಂಡಳಿ ನಡುವಿನ ಕಲಹ ಇದೇ ಮೊದಲಲ್ಲ. ಕಳೆದ ವರ್ಷ ನೌಕರರು ಮೂರು ಬಾರಿ ದೀರ್ಘಕಾಲದ ಪ್ರತಿಭಟನೆ ನಡೆಸಿದ್ದರು. ಇದರಿಂದ ಕಂಪನಿಗೆ ಹಲವು ಕೋಟಿ ರುಪಾಯಿ ನಷ್ಟವಾಗಿತ್ತು.
ಕಂಪನಿಯು ಕಳೆದ ವರ್ಷ ಬಹುನಿರೀಕ್ಷೆಯಿಂದ ಹೊಸ ಸ್ವಿಫ್ಟ್ ಕಾರು ಪರಿಚಯಿಸಿತು. ಗ್ರಾಹಕರ ಬೇಡಿಕೆ ಮುಗಿಲುಮುಟ್ಟಿತ್ತು. ಆದರೆ ನೌಕರರ ಕಿರಿಕಿರಿಯಿಂದಾಗಿ ಸ್ವಿಫ್ಟ್ ಉತ್ಪಾದನೆ ಸ್ಥಗಿತವಾಗಿತ್ತು. ಸ್ವಿಫ್ಟ್ ಬುಕ್ಕಿಂಗ್ ಮಾಡಿದ ಗ್ರಾಹಕರು ಹಲವು ತಿಂಗಳು ಕಾಲ ಕಾಯಬೇಕಾಯಿತು.
ಮಾರುತಿಗೆ ಮತ್ತೆ ಸಂಕಷ್ಟದ ದಿನಗಳು ಆರಂಭವಾಗಿದೆ.


Click it and Unblock the Notifications









