ಮಾರುತಿ ಮಾನೆಸರ್ ಘಟಕದಲ್ಲಿ ಉತ್ಪಾದನೆ ಪುನಾರಂಭ

ಕೆಲವು ಗಂಟೆ ಹಿಂದೆ ಬರೆದ ಸುದ್ದಿ: ಗಲಭೆ ನಡೆದು ಒಂದು ತಿಂಗಳ ತರುವಾಯ ಇಂದು(ಮಂಗಳವಾರ) ಮಾನೆಸರ್ ಘಟಕಕ್ಕೆ ಜಡಿದಿರುವ ಬೀಗಮುದ್ರೆ ತೆರೆದು, ಒಂದು ಶಿಫ್ಟ್ ನಲ್ಲಿ ವಾಹನ ಉತ್ಪಾದನೆ ಆರಂಭಿಸಲು ಮಾರುತಿ ಸುಜುಕಿ ನಿರ್ಧರಿಸಿದೆ. ಪೊಲೀಸ್ ಬಿಗಿಭದ್ರತೆಯಲ್ಲಿ ಘಟಕದ ಬಾಗಿಲು ತೆರೆಯಲು ಕಂಪನಿ ನಿರ್ಧರಿಸಿದೆ.
ಜುಲೈ 18ರಂದು ಮಾನೆಸರ್ ಘಟಕದಲ್ಲಿ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಗಲಭೆ ಆರಂಭವಾಗಿತ್ತು. ಈ ಗಲಭೆಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದರು. ನೂರಾರು ಜನರು ಗಾಯಗೊಂಡಿದ್ದರು. ಈ ಹಿನ್ನಲೆಯಲ್ಲಿ ಕಂಪನಿಯು ಜುಲೈ 21ರಂದು ಘಟಕಕ್ಕೆ ಬೀಗಮುದ್ರೆ ಹಾಕಿತ್ತು.
"ಸುಮಾರು 300 ಕೆಲಸಗಾರರೊಂದಿಗೆ ಇಂದು ನಾವು ಘಟಕದ ಬಾಗಿಲು ತೆರೆಯಲಿದ್ದೇವೆ. ಇಷ್ಟು ಸಿಬ್ಬಂದಿಗಳಿಂದ ಕೇವಲ ಒಂದು ಶಿಫ್ಟ್ ಕೆಲಸ ಮಾಡಲು ಸಾಧ್ಯ. ಬೆಳಗ್ಗೆ 8 ಗಂಟೆಯಿಂದ ಸಂಜೆ 4.30 ಗಂಟೆವರೆಗೆ ಮೊದಲ ಶಿಫ್ಟ್ ಇರಲಿದೆ" ಎಂದು ಮಾರುತಿ ಸುಜುಕಿ ಇಂಡಿಯಾ ಸಿಒಒ ಎಸ್ ವೈ ಸಿದ್ದಿಕಿ ಹೇಳಿದ್ದಾರೆ.
ಇಷ್ಟು ಸಿಬ್ಬಂದಿಗಳ ನೆರವಿನಿಂದ ದಿನಕ್ಕೆ ಸುಮಾರು 150 ಕಾರುಗಳನ್ನು ಮಾನೆಸರ್ ಘಟಕದಲ್ಲಿ ಉತ್ಪಾದಿಸಲು ಕಂಪನಿ ನಿರ್ಧರಿಸಿದೆ. ಈ ಹಿಂದೆ ಇಲ್ಲಿ ದಿನಕ್ಕೆ 1,500ರಿಂದ 1,700ರಷ್ಟು ಕಾರು ಉತ್ಪಾದಿಸಲಾಗುತ್ತಿತ್ತು. ಈ ಘಟಕದ ವಾರ್ಷಿಕ ಕಾರು ಉತ್ಪಾದನಾ ಸಾಮರ್ಥ್ಯ 5.5 ಲಕ್ಷ ಯುನಿಟ್ ಆಗಿದೆ.
ಕಂಪನಿಯು ಭಾರಿ ಪೊಲೀಸ್ ಬಿಗಿಭದ್ರತೆಯಲ್ಲಿ ಕಾರು ಉತ್ಪಾದನೆ ಪುನಾರಂಭಿಸಲಿದೆ. ಇದರೊಂದಿಗೆ ಕಂಪನಿಯು ತನ್ನ ವಿಶೇಷ ಭದ್ರತಾ ಪಡೆ(ಮಾಜಿ ಮಿಲಿಟರಿ ವ್ಯಕ್ತಿಗಳ)ಯನ್ನೂ ನಿಯೋಜಿಸಿದೆ.


Click it and Unblock the Notifications








