ದೇಶದಲ್ಲಿ ಮಿನಿಕಾರಿನ ಎರಡನೇ ಅಂಗಡಿ ಶುಭಾರಂಭ
ಐಕಾನಿಕ್ ಬ್ರಿಟಿಷ್ ಬ್ರಾಂಡ್ ಬಿಎಂಡಬ್ಲ್ಯು ಮಿನಿ, ತನ್ನ ಭಾರತದ ಎರಡನೇ ಶೋರೂಂನ್ನು ದೆಹಲಿಯಲ್ಲಿ ತೆರೆದಿದೆ. ದೆಹಲಿಯ ಬರ್ಡ್ ಆಟೋಮೋಟಿವ್ ಬಿಎಂಡಬ್ಲ್ಯು ಮಾಲಿಕತ್ವದ ಪ್ರೀಮಿಯಂ ಮಿನಿ ಸಣ್ಣಕಾರುಗಳ ಮಾರಾಟಕ್ಕೆ ಅಧಿಕೃತ ಡೀಲರ್ ಆಗಿದೆ. ಮುಂಬೈನ ಇನ್ಫಿನಿಟಿ ಕಾರ್ಸ್ ಮಿನಿ ಕಾರುಗಳ ಪ್ರಪ್ರಥಮ ಮಳಿಗೆಯಾಗಿದೆ.
ನೂತನ ಮಿನಿ ಮಳಿಗೆಯು ವಿಶಾಲವಾಗಿದ್ದು, ಸುಮಾರು ಎರಡು ಮಹಡಿಗಳಲ್ಲಿ, 5 ಸಾವಿರ ಚದರಡಿ ವ್ಯಾಪಿಸಿದೆ. ಕಂಪನಿಯು ಈ ಮಳಿಗೆಯಲ್ಲಿ ಮಿನಿ ಕನ್ವರ್ಟಿಬಲ್ ಮತ್ತು ಮಿನಿ ಕಂಟ್ರಿಮ್ಯಾನ್ ಕಾರುಗಳನ್ನು ಮಾರಾಟ ಮಾಡಲಿದೆ. ಕಂಪನಿಯು ದೆಹಲಿ ವಾಹನ ಪ್ರದರ್ಶನದಲ್ಲಿ ನೂತನ ಮಿನಿಕಾರುಗಳನ್ನು ದೇಶಕ್ಕೆ ಪರಿಚಯಿಸಿತ್ತು.
"ಬರ್ಡ್ ಆಟೋಮೋಟಿವ್ ಮೂಲಕ ಕಂಪನಿಯ ಜನಪ್ರಿಯ ಪ್ರೀಮಿಯಂ ಸಣ್ಣಕಾರನ್ನು ದೆಹಲಿಯಲ್ಲಿ ಮಾರಾಟ ಮಾಡಲಿದ್ದೇವೆ. ಮಿನಿ ಅಂದ್ರೆ ಕೇವಲ ಕಾರಲ್ಲ. ಅದು, ವೀಲ್ಸ್ ವ್ಯಕ್ತಿತ್ವ, ಫ್ಯಾಷನ್ ಮತ್ತು ಜೀವನದ ದಾರಿಯ ಸೂಚಕ. ಮಿನಿ ಎಂದರೆ ಜಗತ್ತಿನಲ್ಲಿಯೇ ಜನಮೆಚ್ಚಿದ ದುಬಾರಿ ಸಣ್ಣಕಾರಾಗಿದೆ" ಎಂದು ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಡಾ. ಆಂಡ್ರೆಸ್ ಸ್ಕಾಫ್ ಹೇಳಿದ್ದಾರೆ.
"ನಾವು ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಕಂಪನಿಯೊಂದಿಗೆ 2007ರಿಂದ ಕೆಲಸ ಮಾಡುತ್ತಿದ್ದೇವೆ. ನೂತನ ಮಿನಿಕಾರುಗಳಿಗೆ ದೇಶದ ಗ್ರಾಹಕರು ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುವ ಭರವಸೆ ನಮಗಿದೆ" ಎಂದು ಬರ್ಡ್ ಆಟೋಮೋಟಿವ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಭಾಟಿಯಾ ಹೇಳಿದ್ದಾರೆ.
ಮಿನಿ ಕಾರುಗಳನ್ನು ಕಂಪನಿಯು ಪೂರ್ಣ ಪ್ರಮಾಣದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳಲಿದೆ. ತನ್ನ ವಿಶಿಷ್ಠ ವಿನ್ಯಾಸ, ಪ್ರೀಮಿಯಂ ಗುಣಮಟ್ಟ, ಕಟ್ಟಿಂಗ್ ಎಡ್ಜ್ ತಂತ್ರಜ್ಞಾನ, ಅತ್ಯುತ್ತಮ ಹ್ಯಾಂಡ್ಲಿಂಗ್ ಸಾಮರ್ಥ್ಯದ ಮೂಲಕ ಮಿನಿ ಕಾರುಗಳು ಜನಪ್ರಿಯ.
ಆದರೆ ಮಿನಿ ಕಾರು ದೇಶದಲ್ಲಿ ಕೊಂಚ ದುಬಾರಿಯೆಂದೇ ಹೇಳಬೇಕು. ಎಂಟ್ರಿಲೆವೆಲ್ ಮಿನಿ ಕೂಪರ್ ದರ ಸುಮಾರು 25-30 ಲಕ್ಷ ರು. ಆಸುಪಾಸಿನಲ್ಲಿದೆ. ಕಂಪನಿಯು ಇತ್ತೀಚೆಗೆ ವಾಹನ ಸಾಲ ಪಡೆಯಲು ನೆರವಾಗುವಂತಹ ಸ್ವಂತ ಹಣಕಾಸು ಸೇವಾ ಸಂಸ್ಥೆಯನ್ನು ಆರಂಭಿಸಿದೆ. ಸಾಲ ಮಾಡಿಯಾದ್ರೂ ದುಬಾರಿ ಕಾರೊಂದು ಖರೀದಿಸಬೇಕೆಂದು ಬಯಸುವರು ಮಿನಿ ಫಿನಾನ್ಸಿಯಲ್ ಸರ್ವಿಸ್ ನೆರವು ಪಡೆಯಬಹುದು.


Click it and Unblock the Notifications









