ಮೈಸೂರು ಆಟೋ ನಗರ: ಗ್ಯಾರೇಜುಗಳ ಊರು
ನಗರದ ಮಧ್ಯಭಾಗದಲ್ಲಿರುವ ಗ್ಯಾರೇಜುಗಳನ್ನೆಲ್ಲ ತೆರವುಗೊಳಿಸಿ ಅವುಗಳಿಗೆ ನಗರದ ಹೊರವಲಯದಲ್ಲಿ ವಿಶೇಷ ಸ್ಥಳಾವಕಾಶ ಮತ್ತು ಸೌಲಭ್ಯ ಕಲ್ಪಿಸಿ ಗ್ಯಾರೇಜುಗಳ ಊರು ಅಥವಾ ಆಟೋ ನಗರ ಸ್ಥಾಪಿಸುವ ಯೋಜನೆ ಇದಾಗಿದೆ.
ಸುಂದರ ನಗರವೆಂದು ಜನಪ್ರಿಯವಾಗಿರುವ ಮೈಸೂರು ನಗರದ ಮಧ್ಯಭಾಗಗಳಲ್ಲಿ ಅತ್ಯಧಿಕ ಸಂಖ್ಯೆಯ ಗ್ಯಾರೇಜುಗಳಿವೆ. ಮೈಸೂರು ನಗರದಲ್ಲಿ ಭಾರಿ ವಾಹನಗಳಿಗೆ 860 ಗ್ಯಾರೇಜುಗಳಿವೆ. ಹಗುರ ವಾಹನ ಮತ್ತು ದ್ವಿಚಕ್ರ ವಾಹನಗಳಿಗಾಗಿ ಸುಮಾರು 1,500 ಗ್ಯಾರೇಜುಗಳಿವೆ. ಮೈಸೂರಿನ ವಾಹನಗಳ ಸಂಖ್ಯೆ 5 ಲಕ್ಷ ಗಡಿ ದಾಟಿದೆ.
ಇಲ್ಲಿರುವ ಟ್ರಕ್, ಬಸ್ ಮುಂತಾದ ಭಾರಿ ವಾಹನಗಳಿಗೆ, ಕಾರು ಮತ್ತು ದ್ವಿಚಕ್ರ ವಾಹನ ಮುಂತಾದ ಹಗುರ ವಾಹನಗಳ ಗ್ಯಾರೇಜುಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗುವ ಯೋಜನೆಯಿದು.
ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಆಟೋ ನಗರ ಸ್ಥಾಪಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಸ್ಥಳ ಪರಿಶೀಲನೆ ನಡೆಸುತ್ತಿದೆ. ಈಗಾಗಲೇ ನಂಜನಗೂಡು ರಸ್ತೆಯಲ್ಲಿರುವ ಟ್ರಕ್ ಟರ್ಮಿನಲ್ ಸಮೀಪ ಮುಡಾ 5.18 ಎಕರೆ ಭೂಮಿ ಗುರುತಿಸಿದೆ. ಇನ್ನುಳಿದ ಮೂರು ಸ್ಥಳಗಳ ಪರಿಶೀಲನೆ ನಡೆಸುತ್ತಿದೆ.
ನಾಲ್ಕು ದಿಕ್ಕುಗಳಲ್ಲಿ ಆಟೋ ನಗರ ಸ್ಥಾಪಿಸಿದ ನಂತರ ಅಲ್ಲಿ ಗ್ಯಾರೇಜುಗಳನ್ನು ತೆರೆಯಲು ಮೆಕಾನಿಕ್ ಗಳಿಗೆ ಸರ್ಕಾರ ಧನ ಸಹಾಯ ನೀಡಲಿದೆ. ಆಟೋ ನಗರ ನಿರ್ಮಾಣಕ್ಕೆ ಡಿವಿಎಸ್ ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ವಾಹನ ರಿಪೇರಿಗೆ 108 ಮಾದರಿಯ ಮೊಬೈಲ್ ಸಾರಿಗೆ ಸೇವೆಯನ್ನು ನೀಡುವುದು ಕೂಡ ಈ ಯೋಜನೆಯ ವಿಶೇಷತೆ. ವಾಹನ ಕೆಟ್ಟರೆ ಚಿಂತೆ ಮಾಡದೇ ತುರ್ತಾಗಿ ಆಟೋ ನಗರಕ್ಕೆ ಕರೆ ಮಾಡಿದರೆ ಸಾಕು. ಗ್ಯಾರೇಜುಗಳ ಊರಿನಿಂದ ನಿಮ್ಮ ವಾಹನದ ಬಳಿಗೆ ಮೆಕಾನಿಕ್ ಗಳು ಬರುತ್ತಾರೆ. (ಕನ್ನಡ ಡ್ರೈವ್ ಸ್ಪಾರ್ಕ್ ವಾರ್ತೆ )


Click it and Unblock the Notifications









