ನಮ್ಮೂರ ರಸ್ತೆಗೆ ನಿಸ್ಸಾನ್ ಅಗ್ಗದ ಕಾರು ದಟ್ಸನ್
2014ರಲ್ಲಿ ಪರಿಷ್ಕೃತ ದಟ್ಸನ್ ಅಗ್ಗದ ಕಾರು ಬ್ರಾಂಡ್ ಮೂಲಕ ದೇಶದ ರಸ್ತೆಯಲ್ಲಿ ಪೈಪೋಟಿ ನಡೆಸಲು ನಿಸ್ಸಾನ್ ಯೋಜಿಸಿದೆ. ನಿಸ್ಸಾನ್ ಸಿಇಒ ಕಾರ್ಲೊಸ್ ಘೋಸ್ನ್ ಟೊಕಿಯೊದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರಗಳಾದ ರಷ್ಯಾ, ಭಾರತ ಮತ್ತು ಇಂಡೋನೇಷ್ಯಾಗಳಿಗೆ ದಡ್ಸನ್ ಅಗ್ಗದ ಕಾರು ಪರಿಚಯಿಸಲು ಕಂಪನಿ ಯೋಜಿಸಿದೆ. ಕಂಪನಿಯು ಅಗ್ಗದ ದಟ್ಸನ್ ಕಾರಿನ ಉತ್ಪಾದನೆಯನ್ನು 1981ರಲ್ಲಿ ಸ್ಥಗಿತಗೊಳಿಸಿತ್ತು. ಆದರೂ ಈ ಬ್ರಾಂಡಿನ ಕಾರುಗಳು ಈಗಲೂ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾ ರಸ್ತೆಗಳಲ್ಲಿವೆ.
"ಇದು ಪರಿಸರ ಸ್ನೇಹಿ, ಆರಾಮದಾಯಕತೆ ಮತ್ತು ಸಣ್ಣ ಎಂಜಿನಿನ ಕಾರಾಗಿದೆ" ಎಂದು ದಟ್ಸನ್ ಕಾರನ್ನು ಕಾರ್ಲೊಸ್ ವ್ಯಾಖ್ಯಾನಿಸಿದ್ದಾರೆ. ಈ ಕಾರು ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟರ್ಸ್ ಗಳೊಂದಿಗೆ ಪೈಪೋಟಿ ನಡೆಸಲಿದೆ.
ಈಗ ದೇಶದಲ್ಲಿ ನಿಸ್ಸಾನ್ ಕಂಪನಿಯ ಮೈಕ್ರಾ ಮಾತ್ರ ಸಣ್ಣಕಾರು ಸೆಗ್ಮೆಂಟಿನಲ್ಲಿದೆ. ಮೈಕ್ರಾ ಕಾರಿನ ಆರಂಭಿಕ ದರ 4,21,765 ರು. ಇದೆ. ಸಣ್ಣಕಾರು ಸೆಗ್ಮೆಂಟಿನಲ್ಲಿ ದಟ್ಸನ್ ದರ ಅಗ್ಗವಾಗಿರುವ ನಿರೀಕ್ಷೆಯಿದೆ. ಕಂಪನಿಯು ದೇಶದ ಪಾಲುದಾರ ಕಂಪನಿ ಅಶೋಕ್ ಲೇಲ್ಯಾಂಡ್ ಜೊತೆಸೇರಿ ದಟ್ಸನ್ ಕಾರುಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.


Click it and Unblock the Notifications
