ಕಾರು ಕನಸಿಗೆ ಕೊಳ್ಳಿಯಿಟ್ಟ ಪೆಟ್ರೋಲ್ ದರ
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಎನ್‌ಡಿಎ ಮೈತ್ರಿಕೂಟ ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಪೆಟ್ರೋಲ್ ದರವೂ ಹಲವು ವರ್ಷಗಳಿಂದ ಕಾರೊಂದನ್ನು ಖರೀದಿಸಲು ಬಯಸುವರ ಕನಸಿಗೆ ಕೊಳ್ಳಿಯಿಟ್ಟಿದೆ. ಹೆಚ್ಚಿನ ಜನರು ಕಾರು ಖರೀದಿ ಕನಸಿನ ಯೋಚನೆಯನ್ನೇ ಅನಿರ್ಧಿಷ್ಟಾವಧಿಗೆ ಬಂದ್ ಮಾಡಿಬಿಟ್ಟಿದ್ದಾರೆ.
ಕುಟುಂಬದ ಜೊತೆ ಪ್ರಯಾಣಕ್ಕಾಗಿ, ನಿತ್ಯ ಕಚೇರಿಗೆ ಹೋಗಿಬರಲು ಕಾರೊಂದನ್ನು ಖರೀದಿಸಬೇಕೆಂಬ ಕನಸಿನಲ್ಲಿದ್ದವರೆಲ್ಲ ಹಿಂದೆ ಸರಿದಿದ್ದಾರೆ. ಕಾರು ಖರೀದಿಸಿದ ನಂತರದ ಖರ್ಚುವೆಚ್ಚಗಳ ಕುರಿತು ಯೋಚಿಸಿ ಭಯಭೀತರಾಗಿದ್ದಾರೆ. ದುಬಾರಿಯಾಗುತ್ತಿರುವ ಪೆಟ್ರೋಲ್ ದರ ಅವರನ್ನೆಲ್ಲ ಕಂಗಲಾಗಿಸಿದೆ.
ಬೆಂಗಳೂರು, ಮಂಗಳೂರು ಸೇರಿದಂತೆ ಹೆಚ್ಚಿನ ನಗರಗಳಲ್ಲಿ ಕಾರು ಬುಕ್ಕಿಂಗ್ ಕ್ಯಾನ್ಸಲ್ ಮಾಡುವರ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಪ್ರಮುಖ ಕಾರು ಶೋರೂಂ ಮೂಲಗಳು ಮಾಹಿತಿ ನೀಡಿವೆ. ಪೆಟ್ರೋಲ್ ಕಾರು ಬುಕ್ಕಿಂಗ್ ಮಾಡುವರ ಪ್ರಮಾಣವು ಗಣನೀಯವಾಗಿ ಕೆಳಗಿಳಿದಿದೆ. ಪೆಟ್ರೋಲ್ ಕಾರು ಖರೀದಿಸಲು ಆಲೋಚಿಸಿದ್ದವರೂ ಡೀಸೆಲ್ ಕಾರು ಬುಕ್ಕಿಂಗ್ ಮಾಡುತ್ತಿದ್ದಾರೆ.
ಈಗ ಪೆಟ್ರೋಲ್ ದರ ಲೀಟರಿಗೆ 80 ರುಪಾಯಿ ದಾಟಿದೆ. ಇದರಿಂದ ಹೆಚ್ಚಿನ ಜನರ ಕಾರು ಖರೀದಿ ಕನಸು ಮಸುಕಾಗಿದೆ. ಕಳೆದ ಏಳೆಂಟು ದಿನಗಳಲ್ಲಿ ಹತ್ತಿಪ್ಪತ್ತು ಜನರು ಪೆಟ್ರೋಲ್ ಕಾರು ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಬೆಂಗಳೂರಿನ ಕಾರು ಡೀಲರೊಬ್ಬರು ಮಾಹಿತಿ ನೀಡಿದ್ದಾರೆ. ಅವರು ಹೆಸರು ಮತ್ತು ಕಾರು ಕಂಪನಿ ಹೆಸರು ಬಹಿರಂಗಪಡಿಸಲು ಇಚ್ಚಿಸಿಲ್ಲ.
ಹೆಚ್ಚಿನ ಜನರು ಡೀಸೆಲ್ ಕಾರು ಖರೀದಿಗೆ ಮುಂದಾಗುತ್ತಿದ್ದಾರೆ ಎಂದು ಅದೇ ಡೀಲರ್ ಹೇಳಿದ್ದಾರೆ. ಡೀಸೆಲ್ ಕಾರು ಖರೀದಿಗೆ ಮುನ್ನ ನೂರೆಂಟು ಪ್ರಶ್ನೆ ಕೇಳಿ ಸಂದಿಗ್ಧತೆ ವ್ಯಕ್ತಪಡಿಸುವ ಗ್ರಾಹಕರೂ ಇದ್ದಾರಂತೆ. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ನಡುವಿನ ವ್ಯತ್ಯಾಸದ ಅರಿವನ್ನು ಮೂಡಿಸುವ ಕೆಲಸವೂ ಮಾಡಬೇಕಾಗುತ್ತದೆ ಎಂದವರು ಹೇಳುತ್ತಾರೆ.
ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಾರು ಕಂಪನಿಗಳು ಡೀಸೆಲ್ ಕಾರುಗಳ ಉತ್ಪಾದನೆಯನ್ನೂ ಹೆಚ್ಚಿಸುತ್ತಿವೆ. ಕೆಲವು ಕಾರು ಕಂಪನಿಗಳು ಈಗಾಗಲೇ ಹೊಸ ಡೀಸೆಲ್ ಕಾರು ಪರಿಚಯಿಸುವ ಯೋಜನೆಯನ್ನೂ ಪ್ರಕಟಿಸಿವೆ.
"ಕಾರು ಬುಕ್ಕಿಂಗ್ ಕ್ಯಾನ್ಸಲ್ ಮಾಡುವ ಕುರಿತು ನಮಗೆ ಯಾವುದೇ ಮಾಹಿತಿ ದೊರಕಿಲ್ಲ" ಎಂದು ಹ್ಯುಂಡೈನ ಮುಖ್ಯಸ್ಥರು ಹೇಳಿದ್ದಾರೆ. "ಆದರೆ ಡೀಸೆಲ್ ಕಾರುಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ" ಎಂದವರು ಹೇಳಿದ್ದಾರೆ.


Click it and Unblock the Notifications









