ರೆನೊ ಪೆಟ್ರೋಲ್ ಪಲ್ಸ್ ರಸ್ತೆಗೆ, ದರ 4.25 ಲಕ್ಷ ರು.
ನೂತನ ರೆನೊ ಪಲ್ಸ್ ಪೆಟ್ರೋಲ್ ಆವೃತ್ತಿಯ ಆರಂಭಿಕ ದರ 4.25 ಲಕ್ಷ ರುಪಾಯಿ. ಇದು ನಿಸ್ಸಾನ್ ಮೈಕ್ರಾ ದರಕ್ಕೆ ಹತ್ತಿರದಲ್ಲಿದೆ. ರೆನೊ ಕಂಪನಿಯು ಕಳೆದ ಜನವರಿ ತಿಂಗಳಲ್ಲಿ ದೆಹಲಿ ವಾಹನ ಪ್ರದರ್ಶನದಲ್ಲಿ ಪಲ್ಸ್ ಡೀಸೆಲ್ ಕಾರನ್ನು ಪರಿಚಯಿಸಿತ್ತು.
ದೇಶದಲ್ಲಿ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆ ಇದ್ದ ಹಿನ್ನಲೆಯಲ್ಲಿ ಕಂಪನಿಯು ಡೀಸೆಲ್ ಆವೃತ್ತಿಯನ್ನು ಪರಿಚಯಿಸಿತ್ತು. ಜೊತೆಗೆ ಶೀಘ್ರದಲ್ಲಿ ಪೆಟ್ರೋಲ್ ಆವೃತ್ತಿಯನ್ನೂ ಹೊರತರುವುದಾಗಿ ಕಂಪನಿ ಹೇಳಿತ್ತು.
ನೂತನ ಪೆಟ್ರೋಲ್ ಪಲ್ಸ್ 1.2 ಲೀಟರಿನ ಮೂರು ಸಿಲಿಂಡರಿನ ಎಂಜಿನ್ ಹೊಂದಿದೆ. ಸುಮಾರು 75 ಅಶ್ವಶಕ್ತಿಯ ಈ ಎಂಜಿನ್ 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಇದೇ ಶಕ್ತಿಯ ಎಂಜಿನ್ ನಿಸ್ಸಾನ್ ಮೈಕ್ರಾದಲ್ಲೂ ಇದೆ. ಆಟೋಮ್ಯಾಟಿಕ್ ಗೇರಿನ ಪಲ್ಸ್ ಕೂಡ ಹೊರತರುವ ಯೋಜನೆಯನ್ನೂ ರೆನೊ ಪ್ರಕಟಿಸಿದೆ.
ರೆನೊ ಪಲ್ಸ್ ಪೆಟ್ರೋಲ್ ಆವೃತ್ತಿಯು ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಇದರ ದೆಹಲಿ ಎಕ್ಸ್ ಶೋರೂಂ ದರ ಈ ಕೆಳಗಿನಂತೆ ಇದೆ.
ರೆನೊ ಪಲ್ಸ್ ಆರ್‌ಎಕ್ಸ್ಇ: 4.25 ಲಕ್ಷ ರುಪಾಯಿ (ಡ್ರೈವರ್ ಏರ್ ಬ್ಯಾಗ್)
ರೆನೊ ಪಲ್ಸ್ ಆರ್‌ಎಕ್ಸ್ಎಲ್: 4.99 ಲಕ್ಷ ರುಪಾಯಿ (ಡ್ರೈವರ್ ಏರ್ ಬ್ಯಾಗ್)
ರೆನೊ ಪಲ್ಸ್ ಆರ್‌ಎಕ್ಸ್‌ಝಡ್: 5.55 ಲಕ್ಷ ರುಪಾಯಿ (ಎಬಿಎಸ್ ಮತ್ತು ಎರಡು ಏರ್ ಬ್ಯಾಗ್)
ನೂತನ ರೆನೊ ಪಲ್ಸ್ ಕಾರು ನಿಸ್ಸಾನ್ ಮೈಕ್ರಾದ ಮರುವಿನ್ಯಾಸದ ಆವೃತ್ತಿಯಂತೆ ಭಾಸವಾಗುತ್ತದೆ. ದುಬಾರಿ ಡೀಸೆಲ್ ಪಲ್ಸ್ ಖರೀದಿಸಲು ಸಾಧ್ಯವಿಲ್ಲದವರು ಅಥವಾ ಎಂಟ್ರಿ ಲೆವೆಲ್ ಕಾರೊಂದರ ಹುಡುಕಾಟದಲ್ಲಿದ್ದವರು ಪೆಟ್ರೋಲ್ ಆವೃತ್ತಿಯ ಪಲ್ಸ್ ಖರೀದಿಸಬಹುದು.


Click it and Unblock the Notifications









