ಡಸ್ಟರ್ ಆಯ್ತು, ದೀಪಾವಳಿಗೆ ರೆನೊ ಸೆಡಾನ್ "ಸ್ಕಾಲಾ"
ದೇಶದ ವಾಹನ ಮಾರುಕಟ್ಟೆಗೆ ಐದನೇ ಉತ್ಪನ್ನ "ಸ್ಕಾಲಾ" ಎಂಬ ಸಿ ಸೆಗ್ಮೆಂಟ್ ಸೆಡಾನ್ ಕಾರನ್ನು ರೆನೊ ಇಂಡಿಯಾ ಪ್ರಸಕ್ತ ದೀಪಾವಳಿ ವೇಳೆಗೆ ಪರಿಚಯಿಸಲು ಯೋಜಿಸಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಐದು ಹೊಸ ಕಾರುಗಳನ್ನು ಪರಿಚಯಿಸಲು ಈ ಹಿಂದೆಯೇ ನಿರ್ಧರಿಸಿತ್ತು. ಅದರಲ್ಲಿ ಡಸ್ಟರ್ ಇತ್ತೀಚೆಗೆ ಆಗಮಿಸಿದ್ದು, ಕೆಲವೇ ತಿಂಗಳಲ್ಲಿ ಸ್ಕಾಲಾ ಸೆಡಾನ್ ಕಾರು ಆಗಮಿಸಲಿದೆ.
ರೆನೊ ಪಲ್ಸರ್ ಕಾರು ನಿಸ್ಸಾನ್ ಮೈಕ್ರಾ ಪ್ಲಾಟ್ ಫಾರ್ಮಿನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಂಪನಿಯು ನಿಸ್ಸಾನ ಸನ್ನಿ ಸೆಡಾನ್ ಆಧರಿತವಾಗಿ ನೂತನ ರೆನೊ ಸ್ಕಾಲಾ ಸೆಡಾನ್ ಕಾರನ್ನು ಅಭಿವೃದ್ಧಿಪಡಿಸಲಿದೆ. ನಿಸ್ಸಾನ್ ಕಾರುಗಳ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ರೆನೊ ಕಾರುಗಳು ಆಗಮಿಸುತ್ತಿವೆ.
2012ರ ರೆನೊ ಸ್ಕಾಲಾ ಸೆಡಾನ್ ಕಾರಿನ ವಿನ್ಯಾಸ ಸಹಜವಾಗಿಯೇ ನಿಸ್ಸಾನ್ ಸನ್ನಿಯಂತೆ ಇರಲಿದೆ. ಸ್ಕಾಲಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕಲಿದೆ. ಇದರ ದರ ಮಾತ್ರ ನಿಸ್ಸಾನ ಸನ್ನಿಗಿಂತ ಕೊಂಚ ಹೆಚ್ಚಿರಲಿದೆ. ಯಾಕೆಂದರೆ ಸನ್ನಿಗೆ ಇದು ಪ್ರತಿಸ್ಪರ್ಧೆ ನೀಡದಂತೆ ನಿಸ್ಸಾನ್-ರೆನೊ ಮೈತ್ರಿ ಕಾರ್ಯತಂತ್ರವಿದೆ.
ನೂತನ ರೆನೊ ಸ್ಕಾಲಾ ಕಾರು 1.5 ಲೀಟರಿನ ಎಚ್ ಆರ್ 15ಡಿಇ ಪೆಟ್ರೋಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಇದು 100 ಅಶ್ವಶಕ್ತಿ ಮತ್ತು 145 ಎನ್ ಎಂ ಟಾರ್ಕ್ ಪವರ್ ನೀಡಲಿದೆ. 1.5 ಲೀಟರಿನ ಕೆ9ಕೆ ಟರ್ಬೊ ಡೀಸೆಲ್ ಎಂಜಿನ್ ಹೊಂದಿರುವ ನಿರೀಕ್ಷೆಯಿದೆ. ಈ ಎಂಜಿನ್ 85 ಅಶ್ವಶಕ್ತಿ ಮತ್ತು 200ಎನ್ಎಂ ಟಾರ್ಕ್ ಪವರ್ ನೀಡಲಿದೆ. ಎಬಿಎಸ್, ಇಬಿಡಿ ಮತ್ತು ಏರ್ ಬ್ಯಾಗ್ ಮುಂತಾದ ಸ್ಟಾಂಡರ್ಡ್ ಸುರಕ್ಷತೆಯ ಫೀಚರುಗಳನ್ನು ಸ್ಕಾಲಾ ಹೊಂದಿರಲಿದೆ.
ನಿಸ್ಸಾನ್ ಸನ್ನಿಯಂತೆ ರೆನೊ ಸ್ಕಾಲಾ ಇಂಟಿರಿಯರ್ ಆಕರ್ಷಕವಾಗಿರುವ ನಿರೀಕ್ಷೆಯಿದೆ. ಕಂಪನಿಯು ಪ್ರಸಕ್ತ ವರ್ಷದ ಅಂತ್ಯದೊಳಗೆ ತನ್ನ ಡೀಲರ್‌ಷಿಪ್ ನೆಟ್‌ವರ್ಕ್ ಸಂಖ್ಯೆಯನ್ನು 100ಕ್ಕೆ ವಿಸ್ತರಿಸಲು ಯೋಜಿಸಿದೆ. ರೆನೊ ಸ್ಕಾಲಾ ಬಂದ ನಂತರ ಕಂಪನಿಯು ಇನ್ಯಾವ ಕಾರು ಪರಿಚಯಿಸಯಿಸಲಿದೆ ಎನ್ನುವ ಕುತೂಹಲ ವಾಹನ ಪ್ರೇಮಿಗಳಲ್ಲಿ ಮೂಡುವುದರಲ್ಲಿ ಸಂಶಯವಿಲ್ಲ.


Click it and Unblock the Notifications









