ಸೈನಾ ನೆಹ್ವಾಲ್‌ಗೆ ಬಿಎಂಡಬ್ಲ್ಯು ಕಾರ್ ಗಿಫ್ಟ್ ಕೊಟ್ಟ ಸಚಿನ್
ಒಲಿಂಪಿಕ್ಸ್ ಬ್ಯಾಂಡ್ಮಿಟನ್ ಪಂದ್ಯಾವಳಿಯಲ್ಲಿ ದೇಶಕ್ಕೆ ಪ್ರಪ್ರಥಮ ಪದಕ ಗಳಿಸಿಕೊಟ್ಟ ಸೈನಾಗೆ ದೇಶದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ನೂತನ ಕಾರನ್ನು ಹಸ್ತಾಂತರಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಕಾರೊಂದನ್ನು ಉಡುಗೊರೆಯಾಗಿ ನೀಡುವುದಾಗಿ ನೀಡಿದ್ದ ಭರವಸೆಯನ್ನು ಆಂಧ್ರ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷ ಚಾಮುಂಡೇಶ್ವರಿ ನಾಥ್ ಈಡೇರಿಸಿದ್ದಾರೆ.
ಭಾನುವಾರ ರಾತ್ರಿ ಹೈದರಾಬಾದಿನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಕ್ರೀಡಾ, ಸಿನಿಮಾ ತಾರೆಗಳು ಮತ್ತು ನೆರೆದಿದ್ದ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಯುವ ಆಟಗಾರ್ತಿ ಸಿಂಧು ಮತ್ತು ಕೋಚ್ ಪಿ ಗೋಪಿಚಂದ್ ಅವರಿಗೂ ಸ್ವಿಫ್ಟ್ ಕಾರನ್ನು ಉಡುಗೊರೆಯಾಗಿ ನೀಡಲಾಯಿತು.
"ಪದಕ ಗೆದ್ದಿರುವುದು ಸೈನಾಗೆ ಸಂತೋಷ ತಂದಿದೆ ಆದರೆ ತೃಪ್ತಿ ತಂದಿಲ್ಲವೆನ್ನುವುದು ನನಗೆ ಖಚಿತವಾಗಿ ಗೊತ್ತು. ನೀವು ಇನ್ನೂ ಎತ್ತರಕ್ಕೆ ತಲುಪಬಲ್ಲಿರಿ ಎಂಬ ಭರವಸೆ ನಮಗಿದೆ" ಎಂದು ಕಾರು ಹಸ್ತಾಂತರಿಸಿದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಒಲಿಂಪಿಕ್ಸ್ ಪಂದ್ಯದಲ್ಲಿ ಎದುರಾಳಿ ಕ್ಸಿನ್ ವಾಂಗ್ ಮೊದಲ ಸೆಟ್ ನಂತರ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಸೈನಾ ನೆಹ್ವಾಲಿಗೆ ಪಂದ್ಯಾವಳಿಯಲ್ಲಿ 3ನೇ ಸ್ಥಾನ ದೊರಕಿತ್ತು. ಈ ಮೂಲಕ ಬ್ಯಾಂಡ್ಮಿಂಟನ್ ಪಂದ್ಯದಲ್ಲಿ ದೇಶಕ್ಕೆ ಪ್ರಪ್ರಥಮ ಕಂಚಿನ ಪದಕ ಗಳಿಸಿಕೊಟ್ಟಿದ್ದರು.
2012 ಬಿಎಂಡಬ್ಲ್ಯು 3 ಸೀರಿಸ್ ಕಾರನ್ನು ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಅನಾವರಣ ಮಾಡಿದ್ದರು. ಇದೇ ಕಾರನ್ನು ಸೈನಾ ನೆಹ್ವಾಲಿಗೆ ಉಡುಗೊರೆಯಾಗಿ ನೀಡಿರುವುದು ವಿಶೇಷ. ನೂತನ 3 ಸೀರಿಸ್ ದರ 28.90 ಲಕ್ಷ ರುಪಾಯಿಯಿಂದ 37.90 ಲಕ್ಷ ರುಪಾಯಿವರೆಗಿದೆ.
ನೂತನ ಬಿಎಂಡಬ್ಲ್ಯು 3 ಸೀರಿಸ್ ಕಾರು ಐದು ಆವೃತ್ತಿಗಳಲ್ಲಿ ದೊರಕುತ್ತಿದೆ. ಇದರಲ್ಲಿ ನಾಲ್ಕು ಆವೃತ್ತಿಗಳು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಇದರಲ್ಲಿ 328ಐ ಸ್ಪೋರ್ಟ್ಸ್ ಲೈನ್ ಮಾತ್ರ ಪೆಟ್ರೋಲ್ ಆಯ್ಕೆಯಲ್ಲಿ ದೊರಕುತ್ತದೆ.
ನೂತನ ಬಿಎಂಡಬ್ಲ್ಯು 3 ಸೀರಿಸ್ ದರ
ಬಿಎಂಡಬ್ಲ್ಯು 320ಡಿ ಕಾರಿನ ದರ 28.90 ಲಕ್ಷ ರುಪಾಯಿ
320ಡಿ ಡಿ ಸ್ಪೋರ್ಟ್ಸ್ ಲೈನ್ ಆವೃತ್ತಿ ದರ:31.50 ಲಕ್ಷ ರು.
320ಡಿ ಲಗ್ಷುರಿ ಲೈನ್ ದರ 31.50 ಲಕ್ಷ ರುಪಾಯಿ.
320ಡಿ ಲಗ್ಷುರಿ ಪ್ಲಸ್: 36.90 ಲಕ್ಷ ರು.
328ಐ ಸ್ಪೋರ್ಟ್ಸ್ ಲೈನ್ ದರ 37.90 ಲಕ್ಷ ರುಪಾಯಿ.
1992ರಲ್ಲಿ ಸೆಕೆಂಡ್ ಹ್ಯಾಂಡ್ ಕಾರೊಂದರ ಮೂಲಕ ತನ್ನ ಬಿಎಂಡಬ್ಲ್ಯು ಕಾರು ಕನಸು ನನಸಾಗಿಸಿಕೊಂಡ ಸಚಿನ್ ತೆಂಡೂಲ್ಕರ್ ಗ್ಯಾರೇಜಿನಲ್ಲಿ ಈಗ ಲೆಕ್ಕವಿಲ್ಲದಷ್ಟು ಕಾರುಗಳಿವೆ. ಓದಿ: ಸಚಿನ್ ತೆಂಡೂಲ್ಕರ್ ಬಾಲ್ಯದ ಕನಸು.


Click it and Unblock the Notifications









