ಸಚಿನ್ ಅಭಿರುಚಿಗೆ ಬಗ್ಗಿದ ಬಿಎಂಡಬ್ಲ್ಯು
ಕ್ರಿಕೆಟ್ ಬಳಿಕ ನಿವೃತ್ತಿ ಜೀವನದಲ್ಲೂ ಒಂದಲ್ಲ ಒಂದು ಕಾರ್ಯ ಚಟುವಟಿಕೆಗಳಲ್ಲಿ ಸದಾ ನಿರತರಾಗಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಮಗದೊಮ್ಮೆ ಸುದ್ದಿಯಾಗಿದ್ದಾರೆ. ಕ್ರಿಕೆಟ್ ನಂತರ ಕಾರುಗಳ ಮೇಲೂ ಹೆಚ್ಚು ಒಲವು ತೋರಿರುವ ಸಚಿನ್ ಈಗ ತಮ್ಮ ಮೆಚ್ಚಿನ ಬಿಎಂಡಬ್ಲ್ಯು ಕಾರನ್ನು ಗ್ಯಾರೇಜ್ ಗೆ ಕರೆದೊಯ್ದಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಶ್ವೇತ ವರ್ಣದ ಬಿಎಂಡಬ್ಲ್ಯು ಐ8 ಕಾರಿಗೆ ಕೆಂಪು ವರ್ಣವಾಗಿ ಪರಿವರ್ತಿಸುವ ಮೂಲಕ ಸಚಿನ್ ಸುದ್ದಿಯಾಗಿದ್ದರು. ಈಗ ಮತ್ತೆ ತಮ್ಮ ಅಭಿರುಚಿಗೆ ತಕ್ಕಂತೆ ಬಿಎಂಡಬ್ಲ್ಯು 750 ಎಲ್ ಐ ಎಂ ಸ್ಪೋರ್ಟ್ ಕಾರನ್ನು ವಿಶೇಷವಾಗಿ ಮಾರ್ಪಾಡುಗೊಳಿಸಿದ್ದಾರೆ.

ನಿಮ್ಮ ಮಾಹಿತಿಗಾಗಿ, ಸಚಿನ್ ತೆಂಡೂಲ್ಕರ್ ಅವರು ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಮುಖ್ಯ ರಾಯಭಾರಿ ಕೂಡಾ ಆಗಿದ್ದಾರೆ.

ಗ್ರಾಹಕರ ವೈಯಕ್ತಿಕ ಬಯಕೆಗಳಿಗೆ ಅನುಸಾರವಾಗಿ ವಾಹನ ಮಾರ್ಪಾಡುಗೊಳಿಸುವ ಬಿಎಂಡಬ್ಲ್ಯುನ ಪ್ರತ್ಯೇಕ ಇಂಡಿವಿಜ್ವಲ್ ವಿಭಾಗವು ಸಚಿನ್ ತೆಂಡೂಲ್ಕರ್ ಕಾರಿಗೆ ಸ್ಪೋರ್ಟ್ ಪ್ಯಾಕೇಜನ್ನು ನೀಡಿದೆ.

2016 ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು ಮುಂದಿನ ತಲೆಮಾರಿನ 7 ಸಿರೀಸ್ ಕಾರನ್ನು ಬಿಡುಗಡೆಗೊಳಿಸಿತ್ತು. ವಿಶೇಷತೆಯೆಂದರೆ ಸ್ವತ: ಸಚಿನ್ ಅವರೇ ಈ ಜನಪ್ರಿಯ ಕಾರನ್ನು ಬರಮಾಡಿಕೊಂಡಿದ್ದರು.

ಹೊಸ ತಲೆಮಾರಿನ ಬಿಎಂಡಬ್ಲ್ಯು 7 ಸಿರೀಸ್ ಕಾರು ದೊಡ್ಡ ಹಾಗೂ ಹೆಚ್ಚು ಅಗಲವಾದ ಕಿಡ್ನಿ ಗ್ರಿಲ್ ಪಡೆದುಕೊಂಡಿದೆ. ಇದರಲ್ಲಿರುವ ಆಕ್ಟಿವ್ ಏರೋ ಕ್ರಿಯಾತ್ಮಕತೆಯು ವರ್ಧಿತ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಿದೆ.

ಲೇಸರ್ ಲೈಟ್ ಹೆಡ್ ಲ್ಯಾಂಪ್ ನೂತನ ಕಾರಿನ ಪ್ರಮುಖ ಆಕರ್ಷಣೆಯಾಗಿದೆ. ಇದರ ಜೊತೆಗೆ ಎಂ ಸ್ಪೋರ್ಟ್ ಪ್ಯಾಕೇಜ್ ಕಾರಿಗೆ ಬೇಕಾದ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ನೀಡುವಲ್ಲಿ ಸಫಲವಾಗಿದೆ.

ಸಚಿನ್ ಕಾರಿನೊಳಗೆ ಯಾವೆಲ್ಲ ಬದಲಾವಣೆಗಳನ್ನು ತರಲಾಗಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ಇದು ಲೆಥರ್ ಹೋದಿಕೆ, ಹೆಡ್ ರೆಸ್ಟ್, ಡಿಜಿಟಲ್ ಹಾಗೂ ಐ ಡ್ರೈವ್ 5.0 ಇನ್ಪೋಟೈನ್ಮೆಂಟ್ ಸಿಸ್ಟಂ, ಟಚ್ ಸ್ಕ್ರೀನ್ ಪರದೆ, ರಿಮೋಟ್ ಕಂಟ್ರೋಲ್ ಪಾರ್ಕಿಂಗ್ ಅಸಿಸ್ಟನ್ಸ್, ಗೆಸ್ಟರ್ ಕಂಟ್ರೋಲ್, ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ 3ಡಿ ಗ್ರಾಫಿಕ್ಸ್ ಗಳನ್ನು ಪಡೆದಿದೆ.

ಅಂದ ಹಾಗೆ ಬಿಎಂಡಬ್ಲ್ಯು 750ಎಲ್ಐ ಎಂ ಸ್ಪೋರ್ಟ್ ಆವೃತ್ತಿಯು ಶಕ್ತಿಶಾಲಿ 4.4 ಲೀಟರ್ ಟ್ವಿನ್ ಪವರ್ ಟರ್ಬೊ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 650 ಎನ್ ಎಂ ತಿರುಗುಬಲದಲ್ಲಿ 450 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ವೇಗದ ವಿಚಾರದಲ್ಲೂ ಬಿಎಂಡಬ್ಲ್ಯು 7 ಸಿರೀಸ್ ನಿಸ್ಸೀಮವೆನಿಸಿಕೊಂಡಿದ್ದು, ಕೇವಲ 4.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ ಹಾಗೂ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.


Click it and Unblock the Notifications








