ಟಾಟಾ ಮೋಟರ್ಸ್ ಮತ್ತು ಫಿಯೆಟ್ ಮೈತ್ರಿ ಅಂತ್ಯ
ದೇಶದಲ್ಲಿ ಟಾಟಾ ಮೋಟರ್ಸ್ ಕಂಪನಿಯ ವಿಶಾಲವಾದ ಮಾರಾಟ ಜಾಲದ ಲಾಭ ಪಡೆಯಲು ಫಿಯೆಟ್ ಕಂಪನಿಯು ವಿತರಣ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಡೀಲ್ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ನೀಡಿರಲಿಲ್ಲ. ಹೀಗಾಗಿ ಕಳೆದೆರಡು ವರ್ಷಗಳಿಂದ ಕಂಪನಿಗಳು ಮೈತ್ರಿ ಕಡಿದುಕೊಳ್ಳುವ ಸೂಚನೆ ನೀಡುತ್ತಿದ್ದವು. ಅಂತಿಮವಾಗಿ ಫಿಯೆಟ್ ಈ ಕುರಿತು ಅಧಿಕೃತವಾಗಿ ಪ್ರಕಟಣೆ ನೀಡಿದೆ.
ಟಾಟಾ ಮೋಟರ್ಸ್ ಮತ್ತು ಫಿಯೆಟ್ ಕಂಪನಿಗಳೆರಡು ಜಂಟಿ ಪ್ರಕಟಣೆಯಲ್ಲಿ ಮೈತ್ರಿ ಕಡಿದುಕೊಂಡ ಕುರಿತು ಪ್ರಕಟಿಸಿವೆ. ಜಂಟಿ ಉದ್ಯಮವಿದ್ದರೂ ಹಣಕಾಸು ವರ್ಷದಲ್ಲಿ ದೇಶದಲ್ಲಿನ ಮಾರಾಟ ಪ್ರಗತಿ ಇಳಿಕೆ ಕುರಿತು ಫಿಯೆಟ್ ನಿರಾಶೆಗೊಂಡಿತ್ತು. "ಕಂಪನಿಯು ಮುಂದಿನ ದಿನಗಳಲ್ಲಿ ಸ್ವಂತ ಮಾರಾಟ ಮತ್ತು ಮಾರುಕಟ್ಟೆ ಚಟುವಟಿಕೆಗಳನ್ನು ಮಾಡಲಿದೆ" ಎಂದು ಈ ಸಂದರ್ಭದಲ್ಲಿ ಫಿಯೆಟ್ ಮುಖ್ಯಸ್ಥ ಸೆರ್ಜಿಯೊ ಮರ್ಕೊನ್ ಹೇಳಿದ್ದಾರೆ.
ಕೆಲವು ದಿನಗಳಲ್ಲಿ ಸ್ವಂತ ಶೋರೂಂ ತೆರೆಯುವುದಾಗಿ ಫಿಯೆಟ್ ಪ್ರಕಟಿಸಿದಾಗಲೇ ಇವೆರಡು ಕಂಪನಿಗಳು ಬೇರೆಯಾಗಲಿವೆ ಎಂಬ ಸೂಚನೆ ದೊರಕಿತ್ತು. ಇಲ್ಲಿವರೆಗೆ ಫಿಯಟ್ ಕಾರುಗಳು ಟಾಟಾ ಮೋಟರ್ಸ್ ಶೋರೂಂಗಳಲ್ಲೇ ಮಾರಾಟವಾಗುತ್ತಿದ್ದವು. ಫಿಯೆಟ್ ಕಂಪನಿಯು ತನ್ನ ತಂತ್ರಜ್ಞಾನವನ್ನು ಟಾಟಾ ಜೊತೆ ಹಂಚಿಕೊಂಡಿದ್ದರಿಂದ ಟಾಟಾ ಮೋಟರ್ಸ್ ಗೆ ಕೊಂಚ ಲಾಭವಾಗಿತ್ತು.
ಟಾಟಾ ಮೋಟರ್ಸ್ ಘಟಕದಲ್ಲೇ ಫಿಯೆಟ್ ಕಾರುಗಳನ್ನು ನಿರ್ಮಿಸಲಾಗುತ್ತಿತ್ತು. ಫಿಯೆಟ್ ಕಂಪನಿಯು ಜಗತ್ತಿನ ಪ್ರಮುಖ ಕಾರು ಕಂಪನಿಯಾಗಿದಗದರೂ, ಪ್ರತಿತಿಂಗಳು ಕೇವಲ ಕೆಲವು ಸಾವಿರ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಕಂಪನಿಯು ಎಂಜಿನ್ ಮಾರಾಟದಲ್ಲಿ ಹೆಚ್ಚಿನ ಲಾಭ ಪಡೆಯುತ್ತಿದೆ. ಕಂಪನಿಯು ಟಾಟಾ ಮೋಟರ್ಸ್ ಮತ್ತು ಮಾರುತಿ ಸುಜುಕಿಗೆ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾರಾಟ ಮಾಡುತ್ತಿದೆ.


Click it and Unblock the Notifications









