ಜೋಳದ ಗಂಜಿಯಾಗ ಕಾರ್ ಕಟ್ಟಿದ ಟಾಟಾ
ಕಂಪನಿಯು ಅಭಿವೃದ್ಧಿಪಡಿಸುತ್ತಿರುವ ಜೋಳದ ಗಂಜಿ ಅಥವಾ ಹಿಟ್ಟಿನ ವಾಹನ ಬಿಡಿಭಾಗಗಳು ವಿಷಯುಕ್ತವಲ್ಲ ಮತ್ತು ದಹ್ಯವಲ್ಲ. ಟಾಟಾ ನ್ಯಾನೊ ಬೆಂಕಿ ದುರ್ಘಟನೆಗಳ ಸಮಯದಲ್ಲಿ ದಹ್ಯವಲ್ಲದ ಬಿಡಿಭಾಗಗಳ ನೂತನ ಅನ್ವೇಷಣೆ ಸುರಕ್ಷತೆಯ ಸವಾರಿಗೂ ಸಹಕರಿಸಬಹುದು.
ಪಾಪ್ ಕಾರ್ನ್ ಗಂಜಿ ಬಳಸಿ ತಯಾರಿಸಿದ ಬಿಡಿಭಾಗಗಳು ಸದೃಢತೆ ಮತ್ತು ನಮ್ಯ ಅಥವಾ ಬಾಗುವ ಗುಣವನ್ನು ಹೊಂದಿದೆ. ಈ ಸರಕುಗಳು ಸುರಕ್ಷತೆಗೂ ಸಹಕರಿಸಲಿದೆ ಎಂದು ಟಾಟಾ ಮೋಟರ್ಸ್ ಹೇಳಿದೆ. ಈಗಾಗಲೇ ಈ ಬಿಡಿಭಾಗಗಳನ್ನು ಪರಿಕ್ಷಾರ್ಥವಾಗಿ ಕೆಲವು ಕಾರುಗಳಿಗೆ ಕಂಪನಿ ಅಳವಡಿಸಿದೆ. ಈ ವರ್ಷದ ಅಂತ್ಯಕ್ಕೆ ಇಂತಹ ಬಿಡಿಭಾಗಗಳ ಮೂಲಕ ಕಂಪನಿಯು ಪೂರ್ಣಪ್ರಮಾಣದ ಉತ್ಪಾದನೆಗೆ ಮುಂದಾಗುವ ನಿರೀಕ್ಷೆಯಿದೆ.
ಇದೀಗ ಪ್ರಾಯೋಗಿಕ ಉತ್ಪನ್ನವಾಗಿದ್ದು, ಕ್ರಾಷ್ ಟೆಸ್ಟ್ ಮಾಡಿದ ನಂತರ ವಾಣಿಜ್ಯ ದೃಷ್ಟಿಯಿಂದ ಮಾರುಕಟ್ಟೆಗೆ ಪರಿಚಯಿಸಲು ಕಂಪನಿ ನಿರ್ಧರಿಸಿದೆ. ಈ ಪ್ರಾಜೆಕ್ಟ್ ಶೀಘ್ರದಲ್ಲಿ ಪೂರ್ಣಗೊಳಿಸಲು ಟಾಟಾ ಕೆಮಿಕಲ್ ಅವಿರತವಾಗಿ ಶ್ರಮಿಸುತ್ತಿದೆ.
ಈ ಉತ್ಪನ್ನಗಳಿಗೆ ಟಾಟಾ ಮೋಟರ್ಸ್ ಪೇಟೆಂಟ್ ಪಡೆಯಲಿದೆಯೇ ಎಂಬುದು ಖಚಿತವಾಗಿಲ್ಲ. ಪೇಟೆಂಟ್ ಪಡೆದರೆ ಬೇರೆ ಯಾವ ಕಂಪನಿಗಳು ಇದನ್ನು ಬಳಸುವಂತಿಲ್ಲ. ಮುಂದಿನ ದಿನಗಳಲ್ಲಿ ವಾಹನ ಮಾರುಕಟ್ಟೆಗೆ ಜೋಳದ ಗಂಜಿ ಹೆಚ್ಚು ಸದೃಢತೆ ನೀಡುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









