ಟಾಟಾ ಧಾರವಾಡ ಘಟಕ ರೆಡಿ, ಸ್ಥಳೀಯರಿಗೆ ಉದ್ಯೋಗ?
ಸಣ್ಣ ವಾಣಿಜ್ಯ ವಾಹನ ಉತ್ಪಾದನೆಗಾಗಿ ಟಾಟಾ ಮೋಟರ್ಸ್ ನಿರ್ಮಿಸಿದ ಧಾರವಾಡ ಘಟಕ ಉತ್ಪಾದನೆಗೆ ಸಿದ್ಧವಾಗಿದೆ. ಕಂಪನಿಯು ಇಲ್ಲಿ ಟಾಟಾ ಏಸ್ ಝಿಪ್ ಮತ್ತು ಟಾಟಾ ಮ್ಯಾಜಿಕ್ ಐರಿಸ್ ಸಣ್ಣ ವಾಣಿಜ್ಯ ವಾಹನಗಳನ್ನು ಉತ್ಪಾದಿಸಲಿದೆ.
"ಧಾರವಾಡದಲ್ಲಿ ಉತ್ಪಾದನೆ ಆರಂಭಿಸಿ ನಮ್ಮ ಕಾರ್ಯಾಚರಣೆ ವಿಸ್ತರಿಸುವ ಈ ಸಂದರ್ಭ ನಮಗೆ ಅತೀವ ಸಂತೋಷ ನೀಡುತ್ತಿದೆ. ದೇಶದಲ್ಲಿ ನಮ್ಮ ವಹಿವಾಟನ್ನು ವಿಸ್ತರಿಸಲು ಮತ್ತು ಪ್ರಬಲ ಅಸ್ತಿತ್ವವನ್ನು ಸ್ಥಾಪಿಸಲು ಧಾರವಾಡ ಘಟನೆ ನೆರವಾಗಲಿದೆ" ಎಂದು ಟಾಟಾ ಮೋಟರ್ಸ್ ಕಂಪನಿಯ ದೇಶದ ವಹಿವಾಟು ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾದ ಪಿ. ಎಂ. ತೆಲಾಂಗ್ ಹೇಳಿದ್ದಾರೆ.

2011ರ ಮೇ ತಿಂಗಳಲ್ಲಿ ಟಾಟಾ ಮೋಟರ್ಸ್ ನಾಲ್ಕು ಚಕ್ರದ, 3-4 ಸಣ್ಣ ಸೀಟಿನ ಟಾಟಾ ಮ್ಯಾಜಿಕ್ ಐರಿಸ್ ಪರಿಚಯಿಸಿತ್ತು. ಮೂರು ಚಕ್ರದ ರಿಕ್ಷಾಗಳಿಗೆ ಪರ್ಯಾಯವಾಗಿ ಐರಿಸನ್ನು ಕಂಪನಿ ಪರಿಚಯಿಸಿತ್ತು. ಇದೇ ಸಮಯದಲ್ಲಿ ತಾಂತ್ರಿಕವಾಗಿ ಪ್ರಬಲವಾಗಿರುವ ಪುಟ್ಟ ಟ್ರಕ್ ಟಾಟಾ ಏಸ್ ಝಿಪ್‌ನ್ನು ಕಂಪನಿಯು ಪರಿಚಯಿಸಿತ್ತು.
ಧಾರವಾಡದ 405 ಎಕರೆ ಪ್ರದೇಶ ವ್ಯಾಪಿಸಿರುವ ಟಾಟಾ ಘಟಕಕ್ಕೆ ಸುಮಾರು 900 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ದೇಶದ ಹಸಿರು ಕಟ್ಟಡ ನಿರ್ಮಾಣ ವಿಭಾಗ(ಐಜಿಬಿಸಿ) ಮಾನದಂಡಗಳಿಗೆ ತಕ್ಕಂತೆ ಪರಿಸರ ಸ್ನೇಹಿಯಾಗಿ ಈ ಘಟಕವನ್ನು ಟಾಟಾ ಮೋಟರ್ಸ್ ನಿರ್ಮಿಸಿದೆ. ಈ ಘಟಕವು ಪರಿಸರ ಸ್ನೇಹಿ ಗುಣಮಟ್ಟಕ್ಕಾಗಿ ಐಎಸ್ಐ ಮಾನದಂಡವನ್ನೂ ಪಡೆದಿದೆ.
ಯುರೋಪ್, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್ ಮತ್ತು ದೇಶದ ಪ್ರಮುಖ ಬಿಡಿಭಾಗ ಪೂರೈಕೆದಾರ ಕಂಪನಿಗಳು ಟಾಟಾ ಮೋಟರ್ಸ್ ಕಂಪನಿಯ ಧಾರವಾಡ ಘಟಕದ ಎಂಜಿನಿಯರಿಂಗ್ ಕೆಲಸಗಳಿಗೆ ನೆರವು ನೀಡಿದೆ. ಟಾಟಾ ಮೋಟರ್ಸ್ ನೂತನ ಘಟಕವು ವಾರ್ಷಿಕ 90 ಸಾವಿರ ಯುನಿಟ್ ವಾಹನ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಇಲ್ಲಿ ಉತ್ಪಾದನೆ ಹೆಚ್ಚಿಸಲಿದೆ.
ಧಾರವಾಡದ ನೂತನ ಘಟಕವು ಈಗಾಗಲೇ 350 ಸಿಬ್ಬಂದಿಗಳನ್ನು ನೇಮಕಮಾಡಿಕೊಂಡಿದೆ. ಕಂಪನಿಯು ರಾಜ್ಯದಲ್ಲಿರುವ 76 ಐಟಿಐ ಸಂಸ್ಥೆಗಳಿಂದ ನೇಮಕಾತಿ ಪ್ರಕ್ರಿಯೆ ನಡೆಸಿದೆ.. ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಒತ್ತು ನೀಡುವುದಾಗಿ ಕಂಪನಿಯ ಭರವಸೆ ನೀಡಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಎಂಬ ನಾಲ್ಕು ಆವರಣದಲ್ಲಿ ನೂತನ ಘಟಕವು ಕಾರ್ಯ ನಿರ್ವಹಿಸಲಿದೆ ಎಂದು ಟಾಟಾ ಮೋಟರ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications








