ಮತ್ತೊಂದು ನ್ಯಾನೋ ಭಸ್ಮ, ಸಮಸ್ಯೆಯಾದರೂ ಏನು?
ಅತಿ ಚಿಕ್ಕ ಬಜೆಟ್‌ನಲ್ಲಿ ದೇಶಕ್ಕೆ ಅತಿ ಚೊಕ್ಕದಾದ ಕಾರು ಪರಿಚಯಿಸಿದ್ದ ಟಾಟಾ ಮೋಟಾರ್ಸ್‌ನ ನ್ಯಾನೋ ಎಲ್ಲ ರೀತಿಯಲ್ಲೂ ರಸ್ತೆಯಲ್ಲಿ ಸುಗಮ ಸಂಚಾರ ಮಾಡುತ್ತಿದೆಯೇ? ನ್ಯಾನೋ ಕಾರ್ಯನಿರ್ವಹಣೆ ಬಗ್ಗೆ ಈ ಹಿಂದೆಯೇ ಹಲವು ಬಾರಿ ಪ್ರಶ್ನೆಗಳು ಎದ್ದಿದ್ದವು.
ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆಯೇ ಆಘಾತಕಾರಿ ಘಟನೆಯೊಂದರಲ್ಲಿ ಮತ್ತೊಂದು ಟಾಟಾ ನ್ಯಾನೋ ಕಾರು ಮುಂಬೈ ನಗರದಲ್ಲಿ ಭಸ್ಮವಾಗಿ ಬಿಟ್ಟಿದೆ. ನವೆಂಬರ್ 10ರಂದು ಶ್ವೇತ ಬಣ್ಣದ ನ್ಯಾನೋ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದೆ.
ದೇವರ ಕೃಪೆ ಏನೋ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಯಾವುದೇ ಗಂಭೀರ ಗಾಯವಿಲ್ಲದೆ ಬಚಾವಾಗಿದ್ದಾರೆ. ನ್ಯಾನೋ ಕಾರು ಪದೇ ಪದೇ ಇಂತಹ ಘಟನೆಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಗ್ರಾಹಕರಲ್ಲಿ ಭೀತಿಗೆ ಕಾರಣವಾಗುತ್ತಿದೆ.
2012ರಲ್ಲಿ ಟಾಟಾ ನ್ಯಾನೋಗೆ ಬೆಂಕಿ ತಗಲುತ್ತಿರುವುದಕ್ಕೆ ಇದೇ ಮೊದಲ ದೃಷ್ಟಾಂತವಾಗಿದೆ. ಯಾವುದೇ ತಾಂತ್ರಿಕ ದೋಷಗಳಿದ್ದರೆ ಕಂಪನಿ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿರುವುದು ಅತಿ ಅಗತ್ಯವಾಗಿದೆ. ಒಟ್ಟಿನಲ್ಲಿ ಈ ವರೆಗೆ 10 ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಇಷ್ಟೇ ಯಾಕೆ ಶ್ರೀಲಂಕಾಕ್ಕೆ ಆಮದಾಗಿದ್ದ ನ್ಯಾನೋ ಕಾರು ಕೂಡಾ ಬೆಂಕಿಗಾಹುತಿಯಾಗಿರುವುದನ್ನು ನಾವು ನೆನಪಿಸಿಕೊಳ್ಳಬಹುದು.
ಈ ನಡುವೆ ಈಗಾಗಲೇ ಮಾರಾಟವಾದ ಹಾಗೂ ಹೊಸದಾಗಿ ತಯಾರಿಯಾಗುತ್ತಿರುವ ಟಾಟಾ ನ್ಯಾನೋ ಕಾರುಗಳಲ್ಲಿ ಹೆಚ್ಚುವರಿ ಫೈರ್ ಪ್ರೂಪಿಂಗ್ ಮೆಟಿರಿಯಲ್ ಆಳವಡಿಸಲಾಗುತ್ತಿದೆ. ಅಲ್ಲದೆ 2012ರ ಪರಿಷ್ಕೃತ ನ್ಯಾನೋ ಅವೃತ್ತಿಯಲ್ಲಿ ಇಂತಹ ಪ್ರಕರಣಗಳು ಇದುವರೆಗೆ ಬೆಳಕಿಗೆ ಬರದಿರುವುದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಹಾಗಿದ್ದರೂ ಈ ಎಲ್ಲ ಘಟನೆಗಳೂ ನ್ಯಾನೋ ಬ್ರಾಂಡ್ ಇಮೇಜ್‌ಗೆ ಧಕ್ಕೆಯನ್ನುಂಟು ಮಾಡುವ ಭೀತಿ ಕಾಡುತ್ತಿದೆ. ಯಾಕೆಂದರೆ ಟಾಟಾ ನ್ಯಾನೋ ಡೀಸೆಲ್ ಹಾಗೂ ಸಿಎನ್‌ಜಿ ಆವೃತ್ತಿ ಇನ್ನಷ್ಟೇ ಆಗಮನವಾಗಬೇಕಿದೆ.

ಹೊಸ ಬೆಳವಣಿಗೆಯೂಂದರಲ್ಲಿ ಟಾಟಾ ನ್ಯಾನೋಗೆ ಮುಂಬೈನಲ್ಲಿ ಆಕಾಸ್ಮತ್ ಬೆಂಕಿ ಹಚ್ಚಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಟಾಟಾ ನ್ಯಾನೋ ಬೆಂಕಿ ತಗಲಿರುವುದು ಈ ವರ್ಷದ ಮೊದಲ ಘಟನೆಯಾದರೂ ಕಾರಿನ ನಿರ್ವಹಣೆ ಬಗ್ಗೆ ಗೊಂದಲ ಮೂಡಲು ಕಾರಣವಾಗಿದೆ.

ಟಾಟಾ ನ್ಯಾನೋ ನೂತನ ಸಿಎನ್‌ಜಿ ಆವೃತ್ತಿ ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವಂತೆಯೇ ಈ ಘಟನೆ ಹಿನ್ನಡೆಗೆ ಹೇತುವಾಗಿದೆ.

ಟಾಟಾ ನ್ಯಾನೋ ನೂತನ ಸಿಎನ್‌ಜಿ ಹಾಗೂ ಡೀಸೆಲ್ ಆವೃತ್ತಿಗಳ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯಲು ಗುರಿಯಿರಿಸಿಕೊಂಡಿದೆ.

ಏನೇ ಆದರೂ ಅತಿ ಚಿಕ್ಕ ಬಜೆಟ್‌ನಲ್ಲಿ ದೇಶಕ್ಕೆ ಸಣ್ಣ ಕಾರಿನ ಪರಿಚಯ ಮಾಡಿಕೊಟ್ಟಿದ್ದ ಟಾಟಾ ನ್ಯಾನೋ ಪ್ರಯತ್ನವನ್ನು ಮೆಚ್ಚಲೇಬೇಕು.


Click it and Unblock the Notifications








