ಟೊಯೊಟಾ ಕಿರ್ಲೊಸ್ಕರ್: ಡಿಸೆಂಬರ್ ಹೇಗಿತ್ತು?

ಕಂಪನಿಯ ವಾರ್ಷಿಕ ವಾಹನ ಮಾರಾಟ ಶೇಕಡ 82ರಷ್ಟು ಏರಿಕೆ ಕಂಡಿದೆ. ಕಂಪನಿಯು ಕಳೆದ ವರ್ಷ ಒಟ್ಟು 1,36,150 ವಾಹನ ಮಾರಾಟ ಮಾಡಿತ್ತು. ಅದಕ್ಕೂ ಹಿಂದಿನ ವರ್ಷ ಅಂದರೆ 2010ರಲ್ಲಿ 74,762 ಯುನಿಟ್ ವಾಹನ ಮಾರಾಟ ಮಾಡಿತ್ತು.
"ಮಾರುಕಟ್ಟೆಯಲ್ಲಿನ ಏರುಪೇರು ಮತ್ತು ತ್ಸುನಾಮಿಯಂತಹ ಪ್ರಾಕೃತಿಕ ವಿಕೋಪಗಳ ನಡುವೆಯೂ ಕಳೆದ ವರ್ಷ ಕಂಪನಿಯು ಮಾರಾಟದಲ್ಲಿ ಗಮನಾರ್ಹ ಪ್ರಗತಿ ದಾಖಲಿಸಿದೆ" ಎಂದು ಟಿಕೆಎಂ ಮಾರುಕಟ್ಟೆ ವಿಭಾಗದ ಸಹ ವ್ಯವಸ್ಥಾಪಕ ನಿರ್ದೇಶಕರಾದ ಸಂದೀಪ್ ಸಿಂಗ್ ಹೇಳಿದ್ದಾರೆ.
ಕಳೆದ ವರ್ಷ ಜಪಾನಿನಲ್ಲಿ ಸಂಭವಿಸಿದ ತ್ಸುನಾಮಿ ಮತ್ತು ಥೈಲಾಂಡಿನಲ್ಲಿ ಉಂಟಾದ ಪ್ರವಾಹ ಕಂಪನಿಯ ವಾಹನ ಉತ್ಪಾದನೆಗೆ ಹೊಡೆತ ನೀಡಿತ್ತು. ಎಟಿಯೋಸ್ ಸರಣಿ ಕಾರುಗಳು ಕಂಪನಿಯ ಮಾರಾಟ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಸಿಂಗ್ ಹೇಳಿದ್ದಾರೆ.
ಕಳೆದ ವರ್ಷ ಕಂಪನಿಯು 43,313 ಯುನಿಟ್ ಎಟಿಯೋಸ್ ಮತ್ತು 20,262 ಯುನಿಟ್ ಎಟಿಯೋಸ್ ಲಿವಾ ಮಾರಾಟ ಮಾಡಿತ್ತು. ಇದೇ ಸಮಯದಲ್ಲಿ ಕಂಪನಿಯು ಇನ್ನೋವಾ, ಫಾರ್ಚ್ಯುನರ್ ಮತ್ತು ಕೊರೊಲಾ ಆಲ್ಟಿಸ್ ಕಾರುಗಳನ್ನು ಕ್ರಮವಾಗಿ 51,930 ಯುನಿಟ್, 10,946 ಯೂನಿಟ್ ಮತ್ತು 9,283 ಯುನಿಟ್ ಮಾರಾಟ ಮಾಡಿತ್ತು.


Click it and Unblock the Notifications








