ಕಾರು ಕಳ್ಳರಿಗೆ ಸಿಂಹಸ್ವಪ್ನವಾದ ವಿದ್ಯಾರ್ಥಿಗಳ ತಂಡ
ಬೆಂಗಳೂರು, ಚೆನ್ನೈ, ಮಂಗಳೂರು, ಮೈಸೂರು, ಹಾಸನ ಮುಂತಾದ ನಗರಗಳಲ್ಲಿ ಆಗಾಗ ಕಾರು ಕಳ್ಳತನ ವರದಿಯಾಗುತ್ತಿದೆ. ಹೆಚ್ಚಿನ ನಗರಗಳಲ್ಲಿ ಕಾರುಕಳ್ಳರ ಉಪಟಳವಿರುತ್ತದೆ. ಕೆಲವೊಮ್ಮೆ ಬಲವಂತದ ಮೂಲಕ ಡ್ರೈವರನ್ನು ಹೊರಗೆ ಹಾಕಿ ಕಾರು ಕದಿಯುವುದೂ ಇದೆ.
ಕಾರುಕಳ್ಳರ ಭಯದಿಂದ ಬೀದಿಬದಿಯಲ್ಲಿ, ಮನೆಮುಂದೆ ಕಾರು ಪಾರ್ಕ್ ಮಾಡಲು ಜನರು ಭಯಪಡುತ್ತಾರೆ. ಆದರೆ ಕಾರು ಕಳ್ಳರಿಗೆ ಸಿಂಹಸ್ವಪ್ನವಾಗುವಂತಹ ಕಾರ್ಯವೊಂದನ್ನು ತಿರುವನಂತಪುರದ ಶ್ರೀ ಚಿತ್ರ ತಿರುನಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಮಾಡಿದ್ದಾರೆ.
ಕಳ್ಳರಿಂದ ಕಾರನ್ನು ರಕ್ಷಿಸಿಕೊಳ್ಳಲು ಅನುವಾಗುವ ನೂತನ ಮೊಬೈಲ್ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಕಾರಿನೊಳಗೆ ಸಾಧನವೊಂದನ್ನು ಅಳವಡಿಸಿ ಮೊಬೈಲಿಗೂ ಆ ಸಾಧನಕ್ಕೂ ಸಂವಹನ ಕಲ್ಪಿಸಿಕೊಡಲಾಗಿದೆ.
ಈ ಕಾನ್ಸೆಪ್ಟ್ ಸಾಧನವನ್ನು ಕಾರಿನೊಳಗೆ ಇಟ್ಟು ನಿಮ್ಮ ಮೊಬೈಲಿಗೆ ನಿಸ್ತಂತು ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ನಿಮ್ಮ ಅರಿವಿಗೆ ಬಾರದಂತೆ ಯಾರಾದರೂ ನಿಮ್ಮ ಕಾರು ಪ್ರವೇಶಿಸಿದರೆ ಈ ಸಾಧನ ನಿಮ್ಮ ಮೊಬೈಲಿಗೆ ಕರೆ ನೀಡುತ್ತದೆ. ನೀವು ಆ ನಂಬರಿಗೆ ವಾಪಸ್ ಕರೆಮಾಡಿದ ಕ್ಷಣ ಕಾರಿನ ಎಂಜಿನ್ ಬ್ಲಾಕ್ ಆಗುತ್ತದೆ. ಮತ್ತೆ ಓನರ್ ಬಂದು ಆ ಕಾರನ್ನು ಸ್ಟಾರ್ಟ್ ಮಾಡಬೇಕಷ್ಟೇ.
ಈ ಕಾರಿನ ಒಂದು ಪ್ರಮುಖ ಅನುಕೂಲತೆಯೆಂದರೆ ನೀವು ಎಷ್ಟೇ ದೂರವಿದ್ದರೂ ನಿಮ್ಮ ಕಾರನ್ನು ರಕ್ಷಿಸಿಕೊಳ್ಳಬಹುದು. ಐಡಿಯಾ ಚೆನ್ನಾಗಿದೆ ಅಲ್ವಾ? ಹಾಗಂತ ಈ ಸಾಧನ ದುಬಾರಿ ಎಂದುಕೊಳ್ಳದಿರಿ. ಇದನ್ನು ಅಭಿವೃದ್ಧಿಪಡಿಸಿದ ತಂಡದ ವಿದ್ಯಾರ್ಥಿಗಳ ಪ್ರಕಾರ ಇದಕ್ಕೆ ಸುಮಾರು 2 ಸಾವಿರ ರುಪಾಯಿ. ಶೇಕಡ 100ರಷ್ಟು ಕಾರನ್ನು ರಕ್ಷಿಸುವ ಭರವಸೆಯನ್ನೂ ಅವರು ನೀಡಿದ್ದಾರೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









