ಕೈ'ಕೊಟ್ಟ' ಕೇಂದ್ರ ಸರಕಾರ; ಡೀಸೆಲ್ ಏರಿಕೆ, ಪೆಟ್ರೋಲ್ ಇಳಿಕೆ
ಇದರ ಬೆನ್ನಲ್ಲೇ ಕೇಂದ್ರ ನೀತಿ ಪ್ರಕಟನೆಯಾದ ಗಂಟೆಯೊಳಗೆ ಡೀಸೆಲ್ ದರದಲ್ಲಿ 50 ಪೈಸೆ ಹೆಚ್ಚಳ ಕಂಡುಬಂದಿದೆ. ಈ ನಡುವೆ ಪೆಟ್ರೋಲ್ ದರದಲ್ಲಿ 25 ಪೈಸೆ ಇಳಿಕೆ ಕಂಡಿರುವುದು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಆದರೆ ವಾರದ ಆರಂಭದಲ್ಲಷ್ಟೇ ಪೆಟ್ರೋಲ್ ದರವನ್ನು 35 ಪೈಸೆಗಳಷ್ಟು ಹೆಚ್ಚಳ ಮಾಡಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ.
ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್‌ಗಳ ಮಿತಿ ಏರಿಕೆ...
ಮತ್ತೊಂದು ಜನ ಸ್ನೇಹಿ ನಿಯಮ ಅನುಸರಿಸಿರುವ ಕೇಂದ್ರ ಸರಕಾರ ಸಾಕಷ್ಟು ಟೀಕೆಗಳ ಬಳಿಕವೀಗ ಸಬ್ಸಿಡಿ ದರದ ಅಡುಗೆ ಅನಿಲ ಸಿಲಂಡರ್‌ಗಳ ಸಂಖ್ಯೆಯನ್ನು 6ರಿಂದ 9ಕ್ಕೆ ಏರಿಕೆಗೊಳಿಸಿದೆ. ಇದು ಮುಂದಿನ ಆರ್ಥಿಕ ಸಾಲಿನಿಂದ ಅಂದರೆ ಎಪ್ರಿಲ್ 1ರಿಂದ ಅನ್ವಯವಾಗಲಿದೆ. ಹಾಗೆಯೇ ಮಾರ್ಚ್ ವರೆಗೆ ಸಬ್ಸಿಡಿ ಸಹಿತ ಅಡುಗೆ ಸಿಲಂಡರ್‌ಗಳನ್ನು 3ರಿಂದ 5ಕ್ಕೆ ಏರಿಸಲಾಗಿದೆ.
ಏತನ್ಮಧ್ಯೆ ಎಲ್‌ಪಿಜಿ ಹಾಗೂ ಸೀಮೆಎಣ್ಣೆ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸರ್ಕಾರ ನಿರ್ದರಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತಕ್ಕೆ ಅನುಸಾರವಾಗಿ ಡೀಸೆಲ್ ದರದಲ್ಲಿ ವ್ಯತ್ಯಾಸ ತರಲು ತೈಲ ಕಂಪನಿಗಳಿಗೆ ಅನುಮತಿ ನೀಡಲಾಗಿದೆ.
ಡೀಸೆಲ್ ಹಂತ ಹಂತವಾಗಿ ಏರಿಕೆ?
ಕಾಲಕಾಲಕ್ಕೆ ಸಣ್ಣ ಪ್ರಮಾಣದಲ್ಲಿ ಡೀಸೆಲ್ ದರ ಪರಿಷ್ಕರಣೆಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರ ತೈಲ ಕಂಪನಿಗಳಿಗೆ ನೀಡಿರುವುದರಿಂದ ಪ್ರತಿ ತಿಂಗಳಲ್ಲಿ 50ಪೈಸೆಯಿಂದ ಹಿಡಿದು 2 ರುಪಾಯಿ ತನಕ ಏರಿಕೆಗೊಳ್ಳುವ ಸಾಧ್ಯತೆಯಿದೆ. ಇದು ದೇಶಧ ಮಧ್ಯದ ವರ್ಗದ ಜನರು ಸೇರಿದಂತೆ ಕೃಷಿ ಇತ್ಯಾದಿ ಚಟುವಟಿಕೆಗಳಿಗಾಗಿ ಡೀಸೆಲ್ ಆಶ್ರಯಿಸುತ್ತಿರುವ ಬಡ ವರ್ಗದ ರೈತರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.
ಇಷ್ಟಕ್ಕೂ ಸರಕಾರದ ನೀತಿ ಜನಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆಯೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications









