ಇನ್ನು ಒಂದೆರಡು ತಿಂಗಳಲ್ಲಿ ಬಜಾಜ್ ಆರ್‌ಇ60 ಓಡಾಟ
ದೇಶದ ವಾಹನೋದ್ಯಮ ಮತ್ತೊಂದು ಮೈಲುಗಲ್ಲನ್ನಿಡಲಿದ್ದು, ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನೂತನ ಕ್ವಾಡ್ರಾಸೈಕಲ್ ವಿಭಾಗ ಅಧಿಕೃತವಾಗಿ ಓಡಾಟ ಆರಂಭಿಸಲಿದೆ. ನಾವು ಈ ಹಿಂದೆ ತಿಳಿಸಿರುವಂತೆಯೇ ಕ್ವಾಡ್ರಾಸೈಕಲ್ ನಾಲ್ಕು ಚಕ್ರಗಳ ನೂತನ ವಾಣಿಜ್ಯ ವಿಭಾಗವಾಗಿರಲಿದೆ.
ಪ್ರಮುಖವಾಗಿಯೂ ಪಟ್ಟಣ ಪ್ರದೇಶಗಳಲ್ಲಿ ಮೂರು ಚಕ್ರಗಳ ಆಟೋ ರಿಕ್ಷಾಗಳಿಗೆ ನೂತನ ಕ್ವಾಡ್ರಾಸೈಕಲ್ ವಿಭಾಗದ ವಾಹನಗಳು ಬದಲಿ ವ್ಯವಸ್ಥೆಯಾಗಿರಲಿದೆ. ಅಂದರೆ ಈಗಾಗಲೇ ಉತ್ಪಾದನಾ ವರ್ಷನ್ ಹಂತದಲ್ಲಿರುವ ಬಜಾಜ್ ಆರ್‌ಇ60 ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿರುವುದು ಖಚಿತವಾಗಿದೆ.
ಹಾಗಿದ್ದರೂ ಕ್ವಾಡ್ರಾಸೈಕಲ್ ಎಂಟ್ರಿಯಿಂದ ನ್ಯಾನೋ ಹಾಗೂ ಅಲ್ಟೊಗಳಂತಹ ಸಣ್ಣ ಕಾರು ಪ್ರಯಾಣಿಕ ಮಾರುಕಟ್ಟೆಗೆ ಯಾವುದೇ ತೊಂದರೆಯಿಲ್ಲ ಎಂದು ಆಟೋ ತಜ್ಞರು ಅಭಿಪ್ರಾಯಪಡುತ್ತಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಕ್ವಾಡ್ರಾಸೈಕಲ್ ವಾಣಿಜ್ಯ ವಿಭಾಗಕ್ಕೆ ಸರಕಾರ ಒಪ್ಪಿಗೆ ಸೂಚಿಸಿತ್ತು.
ಕ್ವಾಡ್ರಾಸೈಕಲ್ ವಾಹನಗಳ ಮುಂದೆ 'Q' ಎಂಬ ದೊಡ್ಡ ಚಿಹ್ನೆ ಕಂಡುಬರಲಿದ್ದು, ಗರಿಷ್ಠ ಪ್ರತಿ ಗಂಟೆಗೆ 70 ಕೀ.ಮೀ. ವೇಗದಲ್ಲಿ ಓಡಾಡುವ ಸಾಮರ್ಥ್ಯ ಹೊಂದಿದೆ. ಕ್ವಾಡ್ರಾಸೈಕಲ್ ವಾಣಿಜ್ಯ ಪ್ರಯಾಣಿಕ ವಿಭಾಗದಲ್ಲಿ ಡ್ರೈವರ್ ಸೇರಿದಂತೆ ಒಟ್ಟು ನಾಲ್ಕು ಮಂದಿಗೆ ಸಂಚರಿಸುವ ಅವಕಾಶವಿರುತ್ತದೆ. ಹಾಗೆಯೇ ಕ್ವಾಡ್ರಾಸೈಕಲ್ ಸರಕು ಸಾಗಾಣಿಕೆ ವಿಭಾಗದಲ್ಲಿ ಡ್ರೈವರ್ ಸೇರಿದಂತೆ ಎರಡು ಜನರಿಗೆ ಕುಳಿತುಕೊಳ್ಳಬೇಕಾದ ಸಿಟ್ಟಿಂಗ್ ವ್ಯವಸ್ಥೆಯಿರಲಿದ್ದು, ಗರಿಷ್ಠ 550 ಕೆ.ಜಿ. ಸರಕುಗಳನ್ನು ತುಂಬಿಕೊಳ್ಳಬಹುದಾಗಿದೆ. ಪ್ರಸ್ತುತ ದೇಶದಲ್ಲಿ ಬಜಾಜ್ ಆಟೋ ಮಾತ್ರ ಕ್ವಾಡ್ರಾಸೈಕಲ್ ವಿಭಾಗಕ್ಕೆ ಸೇರಿದ ವಾಹನಗಳನ್ನು ಹೊಂದಿದೆ.


Click it and Unblock the Notifications









