ಮಾರುತಿ ಬಳಿಕ ಮಹೀಂದ್ರ ಕಾರು ಬೆಲೆ ಏರಿಕೆ ಬಿಸಿ
ಕಳೆದ ದಿನವಷ್ಟೇ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಬೆಲೆ ಏರಿಕೆ ಘೋಷಿಸಿರುವ ಬೆನ್ನಲ್ಲೇ ದೇಶದ ಮತ್ತೊಂದು ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್ ಮುಂಬರುವ ಅಕ್ಟೋಬರ್ ತಿಂಗಳಿಂದ ತನ್ನೆಲ್ಲ ಆವೃತ್ತಿಗಳಿಗೆ ಬೆಲೆ ಏರಿಕೆಗೊಳಿಸುವುದಾಗಿ ತಿಳಿಸಿದೆ.
ದೇಶದ ಎಸ್‌ಯುವಿ ದೈತ್ಯ ಮಹೀಂದ್ರ ಕಂಪನಿಯು ತನ್ನ ಪ್ರಯಾಣಿಕ ಕಾರುಗಳಿಗೆ ಶೇಕಡಾ 2ರಷ್ಟು ಬೆಲೆ ಹೆಚ್ಚಳಗೊಳಿಸಲು ನಿರ್ಧರಿಸಿದ್ದು, ನೂತನ ದರ ನೀತಿಯು 2013 ಅಕ್ಟೋಬರ್ 1ರಂದು ಜಾರಿಗೆ ಬರಲಿದೆ. ಅಂದರೆ ಮಹೀಂದ್ರ ಮಾದರಿ ಕಾರುಗಳಿಗೆ 6,000 ರು.ಗಳಿಂದ 20,000 ರು.ಗಳ ವರೆಗೆ ಬೆಲೆ ವರ್ಧನೆ ಕಂಡುಬರಲಿದೆ.
ಕಳೆದ ದಿನವಷ್ಟೇ ತನ್ನೆಲ್ಲ ಮಾದರಿಗಳ ಪ್ರಯಾಣಿಕ ಕಾರುಗಳಿಗೆ ದರ ಏರಿಕೆಗೊಳಿಸುವುದಾಗಿ ಮಾರುತಿ ಸುಜುಕಿ ತಿಳಿಸಿತ್ತು. ಇದರ ಬೆನ್ನಲ್ಲೇ ದೇಶದ ಮತ್ತೊಂದು ಪ್ರಮುಖ ವಾಹನ ತಯಾರಕ ಸಂಸ್ಥೆಯಿಂದ ದರ ನೀತಿ ಅನ್ವಯವಾಗುತ್ತಿದೆ.
ಒಳಹರಿವು ವೆಚ್ಚ ವರ್ಧಿಸಿರುವುದು, ರುಪಾಯಿ ಅಪಮೌಲ್ಯ ಹಾಗೂ ಕಚ್ಚಾ ಸಾಮಾಗ್ರಿಗಳಿಗೆ ಬೆಲೆ ವರ್ಧನೆಯಾಗಿರುವುದು ದರ ಏರಿಕೆಗೆ ಕಾರಣವಾಗಿದೆ ಎಂದು ಮಹೀಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಮಹೀಂದ್ರ ಆಂಡ್ ಮಹೀಂದ್ರ ಲಿಮಿಟೆಡ್‌ನ ಆಟೋಮೋಟಿವ್ ವಿಭಾಗದ ಮುಖ್ಯ ಕಾರ್ಯನಿರ್ವಾಣಧಿಕಾರಿಯಾಗಿರುವ ಪ್ರವೀಣ್ ಶಾ, ಇದುವರೆಗೆ ಬೆಲೆ ಏರಿಕೆಯನ್ನು ಹಿಡಿದಿಟ್ಟುಕೊಳ್ಳಲಾಗಿತ್ತು. ಆದರೆ ಪ್ರಸ್ತುತ ದರ ಏರಿಕೆ ಅನಿವಾರ್ಯವಾಗಿಬಿಟ್ಟಿದೆ. ಹಾಗಿದ್ದರೂ ಗ್ರಾಹಕರಿಗೆ ಮಹೀಂದ್ರ ಸದಾ ಬದ್ಧವಾಗಿರುತ್ತದೆ ಎಂದಿದ್ದಾರೆ.


Click it and Unblock the Notifications









