ಹೋಂಡಾದಿಂದ ಅಕಾರ್ಡ್ ಹೈಬ್ರಿಡ್ ವರ್ಷನ್ ಪರಿಚಯ
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ 12ನೇ ಆಟೋ ಎಕ್ಸ್ ಪೋದಲ್ಲಿ ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ನೂತನ ಅಕಾರ್ಡ್ ಹೈಬ್ರಿಡ್ ಕಾರನ್ನು ಪರಿಚಯಿಸಿದೆ. ಅಂದ ಹಾಗೆ ಇದು ಮೊದಲ ಬಾರಿಯೇನಲ್ಲ ಹೋಂಡಾ ಸಂಸ್ಥೆಯು ಹೈಬ್ರಿಡ್ ಮಾದರಿಯನ್ನು ಹೊರ ತರುತ್ತಿರುವುದು. ಈ ಮೊದಲು ಸಿವಿಕ್ ಹೈಬ್ರಿಡ್ ವರ್ಷನ್ ಆಗಮನವಾಗಿದ್ದರೂ ನಿರೀಕ್ಷಿಸಿದಷ್ಟು ಯಶ ಸಾಧಿಸಿರಲಿಲ್ಲ.
ಸಮಕಾಲೀನ ಪರಿಸ್ಥಿತಿಯನ್ನು ಪರಿಗಣಿಸಿದರೆ ಎಲೆಕ್ಟ್ರಿಕ್ ವಾಹನ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ. ಹಾಗಿದ್ದರೂ ಸದ್ಯದ ಮಟ್ಟಿಗೆ ದೀರ್ಘ ಪಯಣಕ್ಕೆ ಪೂರಕವಲ್ಲದಿದ್ದರೂ ಹೈಬ್ರಿಡ್ ತಳಿಯ ಕಾರುಗಳು ಇಂತಹ ತೊಡಕುಗಳನ್ನು ನಿವಾರಿಸುವ ಸಾಧ್ಯತೆಯಿದೆ.

ಪ್ರಸ್ತುತ ಹೋಂಡಾ ಅಕಾರ್ಡ್ ಕಾರಿನಲ್ಲಿ 2.0 ಲೀಟರ್ ಗ್ಯಾಸೋಲೈನ್ ಎಂಜಿನ್ ಆಳವಡಿಸಲಾಗುತ್ತಿದ್ದು, 141 ಪಿಎಸ್ ಪವರ್ (165 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರ ಜತೆಗೆ ಎಲೆಕ್ಟ್ರಿಕ್ ಮೋಟಾರು ಕೂಡಾ ಹೊಂದಿರಲಿದ್ದು, ಇವೆರಡು ಒಟ್ಟು ಸೇರಿ 196 ಅಶ್ವಶಕ್ತಿ (306 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.
ಇದರಲ್ಲಿ ಸ್ಮಾರ್ಟ್ ಸ್ಪೋರ್ಟ್ ಹೈಬ್ರಿಡ್ ಐ-ಎಂಎಂಡಿ ಎಂಬ ಮಲ್ಟಿ ಮೋಡ್ ಡ್ರ್ವೈವ್ ಆಯ್ಕೆ ಕೂಡಾ ಇರಲಿದೆ. ಇದನ್ನು ಹೋಂಡಾದ ಭವಿಷ್ಯದ ಕಾರು ಎಂಜಿನ್‌ನ ತಂತ್ರಗಾರಿಕೆಯ ಅರ್ಥ್ ಡ್ರೀಮ್ ಟೆಕ್ನಾಲಜಿ ಅಭಿವೃದ್ಧಪಡಿಸಿದೆ. ಒಟ್ಟು ಮೂರು ಎಂಜಿನ್ ಮೋಡ್‌ಗಳಲ್ಲಿ ಸ್ಪೋರ್ಟ್‌ಹೈಬ್ರಿಡ್ ಐ-ಎಂಎಂಡಿ ತಂತ್ರಗಾರಿಕೆಯು ಲಭ್ಯವಾಗಲಿದೆ. ಇದು ಬ್ಯಾಟರಿ ನಿಯಂತ್ರಿತ ಇವಿ ಡ್ರೈವ್, ಗ್ಯಾಸೋಲೈನ್ ಎಂಜಿನ್ ನಿಯಂತ್ರಿತ ಹೈಬ್ರಿಡ್ ಡ್ರೈವ್ ಮತ್ತು ಪೆಟ್ರೋಲ್ ಎಂಜಿನ್ ಡ್ರೈವ್ ಹೊಂದಿರಲಿದೆ. ಈ ಪೈಕಿ ಹೈಬ್ರಿಡ್ ಡ್ರೈವ್ ವೇಗವರ್ಧಿಸಲು ಹಾಗೆಯೇ ದೀರ್ಫ ಹೈವೇ ಪಯಣಕ್ಕೆ ಪೆಟ್ರೋಲ್ ಎಂಜಿನ್ ಸೂಕ್ತವಾಗಲಿದೆ.

ವಿಶೇಷವೆಂದರೆ ಇವೆಲ್ಲವೂ ಸ್ವಯಂಚಾಲಿತವಾಗಿ ಮೋಡ್ ಬದಲಾವಣೆಯಾಗಲಿದ್ದು, ಇದರ ಫಲವೆಂಬಂತೆ ಗರಿಷ್ಠ ಇಂಧನ ಕ್ಷಮತೆ ಹಾಗೂ ಆರಾಮದಾಯಕ ಚಾಲನೆಗೆ ನೆರವಾಗಲಿದೆ. ಅಂದ ಹಾಗೆ ಭಾರತದ ಮಾರುಕಟ್ಟೆಗೆ ಸ್ಥಳೀಯವಾಗಿ ಜೋಡಣೆ ಮಾಡುವ ಉದ್ದೇಶವನ್ನು ಹೋಂಡಾ ಹೊಂದಿದೆ. ಇದು 30 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.


Click it and Unblock the Notifications








