ಕಾಯುವಿಕೆ ಅಂತ್ಯ; ಜು. 23ಕ್ಕೆ ಹೋಂಡಾ ಮೊಬಿಲಿಯೊ ಲಾಂಚ್
ದೇಶದ ವಾಹನ ಪ್ರೇಮಿಗಳಿಗೆ ಖುಷಿ ಸುದ್ದಿ ಬಂದಿದ್ದು, ಇದೇ ಬರುವ ಜುನ್ 23ರಂದು ಬಹುನಿರೀಕ್ಷಿತ ಹೋಂಡಾ ಮೊಬಿಲಿಯೊ ಎಂಪಿವಿ ಕಾರು ಭರ್ಜರಿ ಬಿಡುಗಡೆಗೊಳ್ಳಲಿದೆ. ಇದಕ್ಕೂ ಮೊದಲು ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ ಮುಖಾಂತರ ಮೊಬಿಲಿಯೊ ಆಗಮನದ ಬಗ್ಗೆ ಭಾರಿ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಇದೀಗ ಜುಲೈ ತಿಂಗಳಲ್ಲಿ ಬಿಡುಗಡೆಯಾಗುವುದು ಖಚಿತವೆನಿಸಿದೆ.
ಹೋಂಡಾ ಗುರಿಯೇನು?
ಈಗಾಗಲೇ ಕಾಂಪಾಕ್ಟ್ ಸೆಡಾನ್ ಹಾಗೂ ಸೆಡಾನ್ ವಿಭಾಗದಲ್ಲಿ ತನ್ನ ಸ್ಥಾನ ಗಟ್ಟಿ ಪಡಿಸಿರುವ ಹೋಂಡಾ, ಮೊಬಿಲಿಯೊ ಬಹು ಬಳಕೆಯ ವಾಹನದ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸುವ ಇರಾದೆಯನ್ನಿಟ್ಟುಕೊಂಡಿದೆ.

ಅಮೇಜ್ ಹಾಗೂ ಸಿಟಿ ಸೆಡಾನ್ ಕಾರುಗಳ ಅದೇ ಯಶಸ್ಸನ್ನು ಮೊಬಿಲಿಯೊ ಮುಂದುವರಿಸುವ ನಿರೀಕ್ಷೆಯಿದೆ. ಇದು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್‌ನಿಂದ (119 ಅಶ್ವಶಕ್ತಿ, 145 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಟ್ರಾನ್ಸ್‌ಮಿಷನ್ ಹೊಂದಿರಲಿದೆ.
ಹಾಗೆಯೇ ಇದರ 1.5 ಲೀಟರ್ ಡೀಸೆಲ್ ಐ-ಡಿಟೆಕ್ ಎಂಜಿನ್ 100ಪಿಎಸ್ ಪವರ್ (200ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ನೂತನ ಮೊಬಿಲಿಯೊದಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸ್ಪೋರ್ಟಿ ಅಲಾಯ್ ವೀಲ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ, ಆಕ್ಸ್, ಯುಎಸ್‌ಬಿ ಜತೆಗೆ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ ನಿರೀಕ್ಷಿಸಬಹುದಾಗಿದೆ.
ಇನ್ನು ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಹೋಂಡಾ ಮೊಬಿಲಿಯೊ ಪ್ರಾರಂಭಿಕ ದರ 6ರಿಂದ 7 ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಪ್ರಸಕ್ತ ತಿಂಗಳಲ್ಲೇ ಮಾರುಕಟ್ಟೆ ಪ್ರವೇಶಿಸಲಿರುವ ಮೊಬಿಲಿಯೊ, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ಇನ್ನೋವಾ, ಮಹೀಂದ್ರ ಕ್ಸೈಲೋ, ಷೆವರ್ಲೆ ಎಂಜಾಯ್, ನಿಸ್ಸಾನ್ ಇವಾಲಿಯಾ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ದಟ್ಸನ್ ಗೊ ಪ್ಲಸ್ ಎಂಪಿವಿ ಸವಾಲನ್ನು ಹೇಗೆ ಮೀರಿ ನಿಲ್ಲಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications








