ಷೆವರ್ಲೆ ಸ್ಪಾರ್ಕ್, ಹ್ಯುಂಡೈ ಸ್ಯಾಂಟ್ರೊ ನಿರ್ಮಾಣ ಸ್ಥಗಿತ
ಸದ್ಯದಲ್ಲೇ ದೇಶದ ರಸ್ತೆಯಿಂದ ಮೊದಲ ಜನಾಂಗದ ಕಾರುಗಳಿಗೆ ಪೂರ್ಣ ವಿರಾಮ ಬೀಳಲಿದೆ. ಗಮನಾರ್ಹ ಬೆಳವಣಿಗೆಯೊಂದರಲ್ಲಿ ದೇಶದ ಎರಡು ಪ್ರಮುಖ ವಾಹನ ತಯಾರಕ ಸಂಸ್ಥೆಗಳು ತನ್ನ ಜನಪ್ರಿಯ ಮಾದರಿಗಳ ನಿರ್ಮಾಣವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.
ಅಮೆರಿಕ ಮೂಲದ ಪ್ರಖ್ಯಾತ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ ಸ್ಪಾರ್ಕ್ ಮತ್ತು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸ್ಯಾಂಟ್ರೊ ನಿರ್ಮಾಣವನ್ನು ದೇಶದಲ್ಲಿ ನಿಲುಗಡೆಗೊಳಿಸಲು ಆಯಾ ಸಂಸ್ಥೆಗಳು ನಿರ್ಧರಿಸಿದೆ.

1997ನೇ ಇಸವಿಯಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸಿದ್ದ ಹ್ಯುಂಡೈ ಸ್ಯಾಂಟ್ರೊ ಕ್ಸಿಂಗ್ ಹ್ಯಾಚ್‌ಬ್ಯಾಕ್ ಕಾರು ಸಣ್ಣ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಜೆನ್‌ಗಳಂತಹ ಮಾದರಿಗಳಿಗೆ ಭಾರಿ ಪೈಪೋಟಿ ಒಡ್ಡಿತ್ತಲ್ಲದೆ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಇದೀಗ ದೇಶದ ರಸ್ತೆಯಲ್ಲಿ 15 ವರ್ಷಗಳ ಅಧಿಪತ್ಯದ ಬಳಿಕ ಹ್ಯುಂಡೈ ಸ್ಯಾಂಟ್ರೊ ಓಡಾಟ ನಿಲುಗಡೆಗೊಳ್ಳಲಿದೆ. ಇದು ಚೆನ್ನೈನ ಹ್ಯುಂಡೈ ಘಟಕದಲ್ಲಿ ಇತರ ಮಾದರಿಗಳ ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲು ನೆರವಾಗಲಿದೆ. ವರದಿಗಳ ಪ್ರಕಾರ ನವೆಂಬರ್ ಅಂತಿಮ ವಾರದಲ್ಲಿ ಜೋಡಣೆಯಾಗಲಿರುವ ಸ್ಯಾಂಟ್ರೊ ಕಾರುಗಳು ಅಂತಿಮವಾಗಿ ಲೋಕಪರ್ಣೆಯಾಗಲಿದೆ.

ಇದರೊಂದಿಗೆ ಮೊದಲ ಜನಾಂಗದ ಎಲ್ಲ ಕಾರುಗಳ ಉತ್ಪಾದನೆ ನಿಲುಗಡೆಗೊಳ್ಳಲಿದೆ. ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಈಗಾಗಲೇ ಎಂ800 ನಿರ್ಮಾಣವನ್ನು ಸ್ಥಗಿತಗೊಳಿಸಿದೆ. ತನ್ನ ಬಿಡುಗಡೆ ಬಳಿಕ ಸ್ಯಾಂಟ್ರೊ ಇದುವರೆಗೆ ದೇಶದಲ್ಲಿ 1.36 ಯುನಿಟ್‌ಗಳ ಮಾರಾಟ ಸಾಧಿಸಿತ್ತು. ಅದೇ ರೀತಿ 5,35,00 ಯುನಿಟ್‌ಗಳನ್ನು ರಫ್ತು ಮಾಡಿತ್ತು.
ಇನ್ನೊಂದೆಡೆ ಕಳೆದ ಏಳು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿರುವ ಜನರಲ್ ಮೋಟಾರ್ಸ್ 1,65,000 ಯುನಿಟ್‌ಗಳ ಮಾರಾಟ ಸಾಧಿಸಿತ್ತು. ಬಲ್ಲ ಮೂಲಗಳ ಪ್ರಕಾರ ಡಿಸೆಂಬರ್‌ನಲ್ಲಿ ಸ್ಪಾರ್ಕ್ ಉತ್ಪಾದನೆ ಕೂಡಾ ನಿಲುಗಡೆಯಾಗಲಿದೆ.


Click it and Unblock the Notifications








