ಮೇಡ್ ಇನ್ ಇಂಡಿಯಾ ಜಾಗ್ವಾರ್ ಎಕ್ಸ್‌ಜೆ ಭಾರತದಲ್ಲಿ ಬಿಡುಗಡೆ
ಬ್ರಿಟನ್‌ನ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಜಾಗ್ವಾರ್ ಲ್ಯಾಂಡ್ ರೋವರ್, ಭಾರತ ನಿರ್ಮಿತ ಎಕ್ಸ್‌ಜೆ ಮಾದರಿಯನ್ನು ದೇಶಕ್ಕೆ ಪರಿಚಯಿಸಿದೆ. ಇದರ ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 93.24 ಲಕ್ಷ ರು.ಗಳಾಗಿರಲಿದೆ (ದೆಹಲಿ ಎಕ್ಸ್ ಶೋ ರೂಂ).
ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್, ಎಕ್ಸ್‌ಜೆ ಪೆಟ್ರೋಲ್ ಮಾದರಿಯನ್ನು ಸಂಪೂರ್ಣವಾಗಿ ದೇಶದಲ್ಲಿ ನಿರ್ಮಾಣ ಮಾಡಿರುವುದು ಸ್ಪರ್ಧಾತ್ಮಕ ದರ ಕಾಯ್ದುಕೊಳ್ಳುವಲ್ಲಿ ನೆರವಾಗಲಿದೆ.

ದೇಶದಲ್ಲಿ ಸ್ಥಳೀಯವಾಗಿ ನಿರ್ಮಾಣವಾದರೂ ಬ್ರಿಟನ್‌ನ ಪ್ರತಿಷ್ಠಿತ ಜಾಗ್ವಾರ್ ಕಾರಿನ ಗುಣಮಟ್ಟತೆಯಲ್ಲಿ ಯಾವುದೇ ಕುಂದು ಕೊರತೆಗಳಾಗಿಲ್ಲ. ಇದು 2.0 ಲೀಟರ್ ಟರ್ಬೊ ಚಾರ್ಜರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 237 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 340 ಎನ್‌ಎಂ ಟಾರ್ಕ್ ಹೊಂದಿರಲಿದೆ.
ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆ ಪ್ರಕಾರ ಹೊಸ ಜಾಗ್ವಾರ್ ಕಾರು ಪ್ರತಿ ಲೀಟರ್‌ಗೆ 9.4 ಕೀ.ಮೀ. ಮೈಲೇಜ್ ನೀಡಲಿದೆ. ಅಲ್ಲದೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಇರಲಿದೆ.

ಹೆಸರಿನಲ್ಲಿ ಸೂಚರಿಸಿರುವಂತೆಯೇ ಜಾಗ್ವಾರ್ ಎಕ್ಸ್‌ಜೆ ಕಾರು ಹಲವು ಐಷಾರಾಮಿ ಸೌಲಭ್ಯಗಳನ್ನು ಪಡೆಯಲಿದೆ. ಇದು ಮಸಾಜ್ ಸೀಟು, ಹೊಂದಾಣಿಸಬಹುದಾದ ಹಿಂದುಗಡೆ ಸೀಟು, ಎಲ್‌ಇಡಿ ರೀಡಿಂಗ್ ಲೈಟ್ಸ್, ರಿಯರ್ ವಿಂಡೋ ಬ್ಲೈಂಡ್ಸ್, ಮೃದು ಬಾಗಿಲು ಮತ್ತು ಮಡಚಬಹುದಾದ ಟೇಬಲ್ ಪಡೆದುಕೊಳ್ಳಲಿದೆ.
ಅಷ್ಟೇ ಅಲ್ಲದೆ ಮೆರಿಡಿಯನ್ ಬೂಸ್ಟಿಂಗ್ 835 ವಾಟ್ಸ್ ಮಾಹಿತಿ ಮನರಂಜನಾ ವ್ಯವಸ್ಥೆಯನ್ನು ಸಹ ಇದರಲ್ಲಿ ಆಳವಡಿಸಲಾಗಿದೆ. ಇದರ ಎಲ್‌ಇಡಿ ಸ್ಕ್ರೀನ್ 10.2 ಇಂಚು ದೊಡ್ಡದಾಗಿರಲಿದೆ. ಒಟ್ಟಿನಲ್ಲಿ ಹೊಸ ಜಾಗ್ವಾರ್ ಎಕ್ಸ್‌ಜೆ ಮಾದರಿಯು, ಆಡಿ ಎ8, ಬಿಎಂಡಬ್ಲ್ಯು 7 ಸಿರೀಸ್ ಮತ್ತು ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.


Click it and Unblock the Notifications








