ಜಾಗ್ವರ್‌ನಿಂದ ಬರುತ್ತಾ ಪಾರದರ್ಶಕ ಕಾರು?
ಜಗತ್ತಿನ ಪ್ರಖ್ಯಾತ ಆಟೋಮೊಬೈಲ್ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಜಾಗ್ವಾರ್, ನಿಕಟ ಭವಿಷ್ಯದಲ್ಲೇ ಎಕ್ಸ್‌ಇ ಕಾಂಪಾಕ್ಟ್ ಸೆಡಾನ್ ಕಾರನ್ನು ಲಾಂಚ್ ಮಾಡಲಿದೆ. ಈ ಸಂಬಂಧ ಆಕರ್ಷಕ ಟೀಸರ್ ಚಿತ್ರವೊಂದನ್ನು ಬಿಡುಗಡೆ ಮಾಡಿದೆ.
ವಿಶೇಷವೆಂದರೆ ಪಾರದರ್ಶಕ ಟೀಸರ್ ಚಿತ್ರ ಬಿಡುಗಡೆ ಮಾಡಿರುವಂತೆಯೇ ಕಾರು ಪ್ರೇಮಿಗಳಲ್ಲಿ ಕುತೂಹಲ ಮನೆ ಮಾಡಿದ್ದು, ನಿಜಕ್ಕೂ ಎಕ್ಸ್‌ಇ ಪಾರದರ್ಶಕ ಕಾರೇ? ಎಂಬ ಅನುಮಾನ ಮೂಡಲು ಕಾರಣವಾಗಿದೆ.

ನಿಮ್ಮ ಅನುಮಾನಗಳಿಗೆ ನಮ್ಮ ಬಳಿ ಉತ್ತರವಿದ್ದು, ಜಾಗ್ವಾರ್ ಕಾಂಪಾಕ್ಟ್ ಸೆಡಾನ್ ಪಾರದರ್ಶಕ ಕಾರಲ್ಲ. ಬದಲಾಗಿ ಪ್ರಸಕ್ತ ಸಾಲಿನ ಅಕ್ಟೋಬರ್ ತಿಂಗಳಲ್ಲೇ ಲಾಂಚ್ ಆಗಲಿರುವ ಈ ಬಹುನಿರೀಕ್ಷಿತ ಕಾರಿನ ಪ್ರಚಾರಕ್ಕಾಗಿ ಜಾಗ್ವಾರ್ ಇಂತಹದೊಂದು ತಂತ್ರ ಅನುಸರಿಸಿದೆ.
ಇದೀಗ ಎರಡನೇ ಬಾರಿಗೆ ಎಕ್ಸ್‌ಇ ಕಾಂಪಾಕ್ಟ್ ಸೆಡಾನ್‌ಗೆ ಸಂಬಂಧಪಟ್ಟಂತೆ ಟೀಸರ್ ಇಮೇಜ್ ಬಿಡುಗಡೆಗೊಳಿಸಲಾಗಿದೆ. ನೆನಪಿಡಿ ಹೆಸರಲ್ಲಿ ಸೂಚಿಸಿರುವಂತೆಯೇ ಇದು ಫೋರ್ ಸಬ್ ಮೀಟರ್ ಕಾಂಪಾಕ್ಟ್ ಸೆಡಾನ್ ಕಾರಾಗಿರುವುದಿಲ್ಲ. ಅಲ್ಲದೆ ಮುಂದಿನ ದಿನಗಳಲ್ಲಿ ಎಕ್ಸ್‌ಇ ಆವೃತ್ತಿಗೆ ಸಂಬಂಧಿಸಿದಂತೆ ಜಾಗ್ವಾರ್ ಇನ್ನಷ್ಟು ಕ್ರಿಯೇಟಿವ್ ಟೀಸರ್ ಇಮೇಜ್ ಹಾಗೂ ವೀಡಿಯೋ ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಪ್ರಸ್ತುತ ಕಾರು 'ಇಗ್ನೇನಿಯಂ' ಫ್ಯಾಮಿಲಿಯ ಆಲ್ ನ್ಯೂ ಫೋರ್ ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಅಲ್ಲದೆ ಎಫ್ ಟೈಪ್ 3.0 ಲೀಟರ್ ವಿ6 ಎಂಜಿನ್ ಕೂಡಾ ಲಭ್ಯವಿರಲಿದೆ. ಇದು ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್, ಬಿಎಂಡಬ್ಲ್ಯು 3 ಸಿರೀಸ್ ಹಾಗೂ ಆಡಿ ಎ4 ಆವೃತ್ತಿಗಳಿಗೆ ನೇರ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications








