ಮೋದಿಗೆ ಹೈ ಸೆಕ್ಯೂರಿಟಿ - ಬಿಎಂಡಬ್ಲ್ಯು 7 ಸಿರೀಸ್ ಪಕ್ಕಾ!
ಭಾರತದ ನಿಯೋಜಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿರುವಂತೆಯೇ ಅವರ ಸುತ್ತಲೂ ಏರ್ಪಡಿಸಬೇಕಾದ ಭದ್ರತೆ ವಿಚಾರಗಳ ಬಗೆಗಿನ ಚರ್ಚೆಯು ಜೋರಾಗಿಯೇ ಸಾಗುತ್ತಿದೆ. ದೇಶದ ಅತ್ಯುನ್ನತ್ತ ಹುದ್ದೆ ಆಲಂಕರಿಸಲಿರುವ ಮೋದಿಗೆ ಸಕಲ ರೀತಿಯ ಭದ್ರತೆ ಒದಗಿಸುವಲ್ಲಿ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಕಟುಬದ್ಧವಾಗಿದೆ.
ಮೋದಿ ನೆಚ್ಚಿನ ಕಾರು ಸ್ಕಾರ್ಪಿಯೊ ಬದಲಾದಿತೇ?
ಹಾಗಿರುವಾಗ ದೇಶದ ಅತ್ಯಂತ ಸುರಕ್ಷಿತ ವಾಹನ ಬಿಎಂಡಬ್ಲ್ಯು 7 ಸಿರೀಸ್ ಕಾರನ್ನೇ ನರೇಂದ್ರ ಮೋದಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಮೂಲಕ ಮನಮೋಹನ್ ಸಿಂಗ್ ಪರಂಪರೆಯನ್ನು ಮೋದಿ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯಿದೆ. ಇದರಂತೆ ಭದ್ರತೆಯ ದೃಷ್ಟಿಕೋನದಲ್ಲಿ ಮೋದಿ ಪಡೆಯಲಿರುವ ಬಿಎಂಡಬ್ಲ್ಯು 7 ಸಿರೀಸ್ ಕಾರು ಕೆಲವೊಂದು ಮಾರ್ಪಾಡುಗಳನ್ನು ಪಡೆಯಲಿದೆ.

ಬಲ್ಲ ಮೂಲಗಳ ಪ್ರಕಾರ ಮೋದಿ ನೂತನ ಕಾರು, ನೆಲಬಾಂಬ್ ದಾಳಿಯಿಂದ ಹಿಡಿದು ಎಕೆ 47ಗಳಂತಹ ಶಕ್ತಿಶಾಲಿ ಬುಲೆಟ್ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿರಲಿದೆ.

ವಿಶೇಷವಾಗಿ ತಯಾರಿಸಲ್ಪಟ್ಟ ಬಿಎಂಡಬ್ಲ್ಯು 7 ಸಿರೀಸ್ ಕಾರಿನ ಮಗದೊಂದು ವೈಶಿಷ್ಟ್ಯವೆಂದರೆ ಇದು ಫ್ಲ್ಯಾಟ್ ಟೈರ್‌ನಲ್ಲೇ ಸುಮಾರು ಕೀ.ಮೀ.ಗಳಷ್ಟು ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಇದರಲ್ಲಿ ಆಳವಡಿಸಲಾಗಿರುವ ಮುಂದುವರಿದ ಶಾಖ ಸಂದೇಕಗಳು ಕ್ಷಿಪಣಿ ಹಾಗೂ ಬಾಂಬ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಇಂಧನ ಟ್ಯಾಂಕ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಯಾವುದೇ ದಾಳಿಯಲ್ಲೂ ಸ್ಪೋಟಗೊಳ್ಳುವುದಿಲ್ಲ. ಹಾಗೆಯೇ ರಾಸಾಯನಿಕ ದಾಳಿ ನಿಭಾಯಿಸುವಲ್ಲಿ ಶಕ್ತವಾಗಿರುತ್ತದೆ. ಅಷ್ಟೇ ಅಲ್ಲದೆ ಇದರ ಕ್ಯಾಬಿನ್‌ನಲ್ಲಿ ಆಳವಡಿಸಲಾಗಿರುವ ಗ್ಯಾಸ್ ಫ್ರೂಪ್ ಚೇಂಬರ್ ನಿರಂತರ ಆಮ್ಲಜನಕ ಒದಗಿಸುತ್ತದೆ.

ಅಂದ ಹಾಗೆ ಪ್ರಮಾಣ ವಚನ ಸಮಾರಂಭಕ್ಕೆ ತಮ್ಮ ನೆಚ್ಚಿನ ಸ್ಕಾರ್ಪಿಯೊದಲ್ಲಿ ಆಗಮಿಸಲಿರುವ ಮೋದಿ, ತದಾ ಬಳಿಕ ಬಿಎಂಡಬ್ಲ್ಯು 7 ಸಿರೀಸ್ ಮುಖಾಂತರ ಎಸ್‌ಪಿಜಿ ರಕ್ಷಣಾ ಕವಚವನ್ನು ಪಡೆಯಲಿದ್ದಾರೆ. ಆದರೆ ಇವೆಲ್ಲವು ಇನ್ನಷ್ಟೇ ಅಂತಿಮವಾಗಬೇಕಾಗಿದೆ. ಯಾಕೆಂದರೆ ಯಾವುದಕ್ಕೂ ಮೋದಿ ಅವರಿಂದ ಹಸಿರು ನಿಶಾನೆ ದೊರಕಬೇಕಾಗಿದೆ.

ಹಾಗಿದ್ದರೂ ಕಳೆದ ಹಲವಾರು ವರ್ಷಗಳಿಂತ ಸ್ವದೇಶಿ ನಿಲುವಿಗೆ ಬದ್ಧರಾಗಿದ್ದ ಮೋದಿ, ತಮ್ಮ ನೆಚ್ಚಿನ ಸ್ಕಾರ್ಪಿಯೊ ಕಾರನ್ನು ಬದಲಾಯಿಸಲಿದ್ದಾರೆಯೇ ಎಂಬುದು ಕುತೂಹಲಕರ ಸಂಗತಿಯಾಗಿದೆ. ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಾಜಿ ಎಸ್‌ಪಿಜಿ ಅಧಿಕಾರಿಯೊಬ್ಬರು, ಪ್ರಧಾನಿ ದರ್ಜೆಯ ಹುದ್ದೆಯಲ್ಲಿರುವವರಿಗೆ ಸ್ಕಾರ್ಪಿಯೊ ಯೋಗ್ಯ ವಾಹನವಲ್ಲ. ಯಾಕೆಂದರೆ ಇದರ ಎತ್ತರ ಸಮಸ್ಯೆ ಸೃಷ್ಟಿಸಲಿದೆ. ಆದರೆ ಅಂತಿಮ ಆಯ್ಕೆ ಪ್ರಧಾನಿ ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.

ರಾಜೀವ್ ಗಾಂಧಿ ಬಳಿಕ ಅತ್ಯಂತ ಹೆಚ್ಚು ಅಪಾಯ ಆಹ್ವಾನಿಸಿರುವ ಪ್ರಧಾನಿಯೆಂದು ಗುರುತಿಸಿಕೊಂಡಿರುವ ಮೋದಿಗೆ ಗರಿಷ್ಠ ಭದ್ರತೆ ನೀಡುವುದಕ್ಕಾಗಿ ಎಸ್‌ಪಿಜಿಯ ಡಿ-ಡೇ ಯುನಿಟ್ ಕಳೆದ ಜನವರಿಯಿಂದಲೇ ತಲ್ಲೀನವಾಗಿದೆ. ವೈಯಕ್ತಿಕರಣಗೊಳಿಸಿದ ಮೋದಿ ಕಾರು ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಈ ಪೈಕಿ ಬೆಂಗಾವಲು ಪಡೆಯಲ್ಲಿ ನಕಲಿ ಬಿಎಂಡಬ್ಲ್ಯು ಕಾರುಗಳ ಸೇರ್ಪಡೆ, ಉಪಗ್ರಹ ದೂರವಾಣಿ ಮತ್ತು ಜಾಮ್ಮರ್‌ಗಳಲ್ಲಿ ಹೊಸ ಗುಪ್ತಚರ ಹಾಗೂ ಸಂವಹನ ವೈಶಿಷ್ಟ್ಯಗಳ ಸ್ಥಾಪನೆಯಾಗಲಿದೆ.

ಬಾಂಬ್ ಸ್ಕ್ವಾಡ್‌ಗಳ ಹೊರತಾಗಿ ಮೋದಿ ಕಾವಲು ಪಡೆಯಲ್ಲಿ ಒಂಬತ್ತು ಕಾರುಗಳು ಸುತ್ತಾಡುವ ನಿರೀಕ್ಷೆಯಿದೆ. ಈ ಪೈಕಿ ಕನಿಷ್ಠ ಎರಡು ಕಾರುಗಳು ಬಿಎಂಡಬ್ಲ್ಯು ನಕಲಿ ಮಾದರಿಗಳನ್ನು ಹೊಂದುವ ಸಾಧ್ಯತೆಯಿದ್ದು, ಐದು ಬೆಂಗಾವಲು ವಾಹನಗಳಿರಲಿದೆ. ಹಾಗೆಯೇ ಬೆದರಿಕಾ ಪ್ರಮಾಣವನ್ನು ಪರಿಗಣಿಸಿ ಎಸ್‌ಪಿಜಿ, ಪ್ರಧಾನ ಮಂತ್ರಿ ನಕಲಿ ಮಾರ್ಗಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಇವೆಲ್ಲದರ ಜೊತೆಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಸದಾ ಸುತ್ತಾಡುತ್ತಿರುವ ನರೇಂದ್ರ ಮೋದಿಗಾಗಿ ಏರ್ ಇಂಡಿಯಾ ಒನ್ ವಿಮಾನದ ವಿಶೇಷ ಸೇವೆಯನ್ನು ಪಡೆಯುವ ಸಾಧ್ಯತೆಯಿದೆ. ಇದು ಗರಿಷ್ಠ ಭದ್ರತೆಯೊಂದಿಗೆ ಯಾವುದೇ ಕ್ಷಣದಲ್ಲಾದರೂ ದೇಶದ ಪ್ರಧಾನ ಮಂತ್ರಿಯ ಪ್ರಯಾಣದ ಬೇಡಿಕೆಗಳನ್ನು ಪೂರ್ಣಗೊಳಿಸಲಿದೆ.
ಫೋಟೊ ಕೃಪೆ: ಪಿಕಿಪೀಡಿಯಾ


Click it and Unblock the Notifications








