ರಾಜ್ಯೋತ್ಸವ ಕೊಡುಗೆ; ಪೆಟ್ರೋಲ್ 2.41 ರು., ಡೀಸೆಲ್ 2.25 ರು. ಇಳಿಕೆ
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ಬಂದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.
ಅಂತರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ ಬೆಲೆ ಇಳಿಕೆಯ ಪ್ರವೃತಿ ಮುಂದುವರಿದಿರುವ ಹಿನ್ನಲೆಯಲ್ಲಿ ಪೆಟ್ರೋಲ್ ಬೆಲೆ ರು. 2.41ರಷ್ಟು ಹಾಗೆಯೇ ಡೀಸೆಲ್ ಬೆಲೆ ರು. 2.25ರಷ್ಟು ಇಳಿಕೆಯಾಗಿದೆ.

ಈ ಮೂಲಕ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಆರನೇ ಬಾರಿಗೆ (ಆಗಸ್ಟ್ ಬಳಿಕ) ಇಂಧನ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ನೂತನ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿರುವುದಾಗಿ ಇಂಡಿಯನ್ ಒಯಿಲ್ ಕಾರ್ಪೋರೇಷನ್ ಘೋಷಿಸಿದೆ. ಅಲ್ಲದೆ ಒಂದೇ ತಿಂಗಳ ಅವಧಿಯೊಳಗೆ ಡೀಸೆಲ್ ಬೆಲೆಯಲ್ಲಿ ಎರಡೆರಡು ಬಾರಿ ಇಳಿಕೆ ಕಂಡುಬಂದಿದೆ. ಇದಕ್ಕೂ ಮೊದಲು ಕೇಂದ್ರ ಸರಕಾರ ಡೀಸೆಲ್ ಬೆಲೆಯನ್ನು ಅನಿಯಂತ್ರಣಗೊಳಿಸಿತ್ತು.
ಒಟ್ಟಿನಲ್ಲಿ ಆಗಸ್ಟ್ ತಿಂಗಳ ಬಳಿಕ ಪೆಟ್ರೋಲ್ ಬೆಲೆಯಲ್ಲಿ 9.26ರಷ್ಟು ಇಳಿಕೆ ಕಂಡುಬಂದಿದೆ. ಅದೇ ಹೊತ್ತಿಗೆ ಸಬ್ಸಿಡಿ ರಹಿತ ಅಡುಗೆ ಅನಿಲ (14.2 ಕೆ.ಜಿ) ಬೆಲೆಯಲ್ಲಿ 18.5 ರು. ಇಳಿಕೆಯಾಗಿದ್ದು ಪ್ರತಿ ಸಿಲಿಂಡರ್ ದರ ರು. 865ಕ್ಕೆ ಬಂದು ತಲುಪಿದೆ.


Click it and Unblock the Notifications








