ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ 2 ರು.ಗಳಷ್ಟು ಇಳಿಕೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ರಾಜ್ಯ ನಿಯಂತ್ರಿತ ತೈಲ ಮಾರಾಟ ಕಂಪನಿಗಳು (ಒಎಂಸಿ) 2 ರು.ಗಳಷ್ಟು ಇಳಿಕೆ ಮಾಡಿದೆ. ಇದರೊಂದಿಗೆ ಕಳೆದ ಆಗಸ್ಟ್ ತಿಂಗಳ ಬಳಿಕ ಇಂಧನ ಬೆಲೆಯಲ್ಲಿ ಎಂಟನೇ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.
ಹೊಸ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಗ್ರಾಹಕರು ಸಿಹಿ ಅನುಭವಿಸುವಂತಾಗಿದೆ. ಇದೀಗ ರಾಜ್ಯ ಬಸ್ ಪ್ರಯಾಣ ಇಳಿಕೆ ಕಂಡುಬರುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಅನ್ವಯವಾಗುವುದರಿಂದ ರಾಜ್ಯದಿಂದ ರಾಜ್ಯಕ್ಕೆ ಬೆಲೆ ಕಡಿತ ವಿಭಿನ್ನವಾಗಿರಲಿದೆ.
ಪೆಟ್ರೋಲ್ ಬೆಲೆಯು ಕಳೆದ 45 ತಿಂಗಳಲ್ಲಿ ಹಾಗೂ ಡೀಸೆಲ್ ದರವು ಕಳೆದ 17 ತಿಂಗಳಲ್ಲೇ ಅತಿ ಕಡಿಮೆ ದರವನ್ನು ತಲುಪಿದೆ. ಹಾಗೆಯೇ ಅಕ್ಟೋಬರ್ 18ರಂದು ಡೀಸೆಲ್ ಅನಿಯಂತ್ರಣಗೊಳಿಸಿದ ಬಳಿಕ ನಾಲ್ಕನೇ ಬಾರಿಗೆ ಡೀಸೆಲ್ ಬೆಲೆ ಇಳಿಕೆಯಾಗಿದೆ.
ಕಳೆದ ನವೆಂಬರ್ 30ರಂದು ತೈಲ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 91 ಹಾಗೂ 84 ಪೈಸೆಗಳಷ್ಟು ಇಳಿಕೆಗೊಳಿಸಿತ್ತು. ಸೋಮವಾರದಂದು ಬ್ರೆಂಟ್ ಕಚ್ಚಾ ತೈಲ ಬೆಲೆಯು ಕಳೆದ ಐದು ವರ್ಷಗಳಲ್ಲೇ ಅತಿ ಕನಿಷ್ಠ 60 ಡಾಲರ್‌ಗೆ ಬಂದು ತಲುಪಿತ್ತು.
ಪೆಟ್ರೋಲ್ ಬೆಲೆ (ಲೀಟರ್‌ಗೆ)
ದೆಹಲಿ - 61.33 ರು. (44 ತಿಂಗಳಲ್ಲೇ ಅತ್ಯಂತ ಕಡಿಮೆ)
ಮುಂಬೈ - 68.86 ರು.
ಬೆಂಗಳೂರು - 67.54 ರು.
ಡೀಸೆಲ್ ಬೆಲೆ (ಲೀಟರ್‌ಗೆ)
ದೆಹಲಿ - 50.51 ರು. (2013 ಜುಲೈ ಬಳಿಕ ಅತ್ಯಂತ ಕಡಿಮೆ)
ಮುಂಬೈ - 57.91 ರು.
ಬೆಂಗಳೂರು - 55.10 ರು.


Click it and Unblock the Notifications








