ದಿಲ್ಲಿಯಲ್ಲಿ ಡೀಸೆಲ್ ಎಸ್‌ಯುವಿ, ಐಷಾರಾಮಿ ಕಾರುಗಳ ದಾಖಲಾತಿಗೆ ನಿಷೇಧ
ದೆಹಲಿಯಲ್ಲಿ ಪಸರಿಸುತ್ತಿರುವ ತೀವ್ರ ಮಟ್ಟದ ವಾಯು ಮಾಲಿನ್ಯವನ್ನು ನಿಯಂತ್ರಣ ಹೇರುವ ಪ್ರಯತ್ನದಲ್ಲಿರುವ ದೇಶದ ಸರ್ವೋಚ್ಛ ನ್ಯಾಯಾಲವು, 2000 ಸಿಸಿ ಎಂಜಿನ್ ಸಾಮರ್ಥ್ಯಕ್ಕೂ ಹೆಚ್ಚಿನ ಡೀಸೆಲ್ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಹಾಗೂ ಐಷಾರಾಮಿ ಕಾರುಗಳ ದಾಖಲಾತಿಗೆ 2016 ಮಾರ್ಚ್ 31ರ ವರೆಗೆ ನಿಷೇಧ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಹೊರಡಿಸಿರುವ ಮಹತ್ವದ ತೀರ್ಪು 2016 ಜನವರಿ 01ರಿಂದಲೇ ಜಾರಿಗೆ ಬರಲಿದೆ. ಇದಕ್ಕೂ ಮೊದಲು ರಾಷ್ಟ್ರ ರಾಜಧಾನಿಯ ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು.

ನಗರಕ್ಕೆ ಪ್ರವೇಶಿಸುವ ಟ್ರಕ್ ಗಳಿಂದ ಅತಿ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ ಎಂಬುದನ್ನು ಮನಗಂಡಿರುವ ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ಟ್ರಕ್ ಪ್ರವೇಶಕ್ಕೂ ನಿಷೇಧ ಹೇರಿದೆ. ಅಲ್ಲದೆ ದೆಹಲಿಗೆ ಸರಕು ತಲುಪಿಸುವ ಟ್ರಕ್ ಗಳು ಪರಿಸರ ನಷ್ಟ ಪರಿಹಾಲ ಶುಲ್ಕ (environment compensation charge ) ಪಾವತಿಸಬೇಕಾಗುತ್ತದೆ. ಇಲ್ಲಿ ದೊಡ್ಡ ಟ್ರಕ್ ಗಳಿಗೆ 2,600 ಹಾಗೂ ಹಗುರ ವಾಣಿಜ್ಯ ವಾಹನಗಳು 1,400 ರು. ಪಾವತಿಸಬೇಕಾಗುತ್ತದೆ.

ಖಾಸಗಿ ಟ್ಯಾಕ್ಸಿ ವಾಹನಗಳಿಗೂ ಚಾಟಿಯೇಟು ಬೀಸಿರುವ ಸುಪ್ರೀಂ ಕೋರ್ಟ್, ಮುಂಬರುವ ಮಾರ್ಚ್ 31ರ ಒಳಗಡೆ ತಮ್ಮ ವಾಹನಗಳನ್ನು ಸಿಎನ್‌ಜಿಯಾಗಿ ಪರಿವರ್ತಿಸುವಂತೆ ಸೂಚಿಸಿದೆ.

ಹಾಗಿದ್ದರೂ ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶದಿಂದ ಸಣ್ಣ ಡೀಸೆಲ್ ಎಂಜಿನ್ ಸಾಮರ್ಥ್ಯದ ವಾಹನಗಳನ್ನು ಹೊರತುಪಡಿಸಿರುವುದು ದೈನಂದಿನ ಸವಾರರು ಸ್ವಲ್ಪ ನಿರಾಳತೆ ಅನುಭವಿಸುವಂತಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ರಾಷ್ಟ್ರ ರಾಜಧಾನಿಯ ಮಾಲಿನ್ಯ ಮಟ್ಟ ನಿಯಂತ್ರಿಸಲು ಮುಂದಾಗಿದ್ದ ಸರಕಾರವು ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ ಸಂಚರಿಸುವಂತೆ ಸೂಚಿಸಿತ್ತು. ಈ ಮೂಲಕ ತಿಂಗಳಿಗೆ 15 ದಿನಗಳಷ್ಟು ಸಂಚರಿಸಲು ಅವಕಾಶವಿದೆ. ಇದು ಸಾರ್ವಜನಿಕ ವಾಹನಗಳಿಗೆ ಅನ್ವಯವಾಗುವುದಿಲ್ಲ.

ದೆಹಲಿ ಪರಿಸರ ಮಾಲಿನ್ಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ 'ದಿಲ್ಲಿಯಲ್ಲಿ ಇರುವುದೆಂದರೆ ಗ್ಯಾಸ್ ಚೇಂಬರ್ ನಲ್ಲಿ ಇದ್ದಂತೆ' ಎಂದು ಹೇಳಿರುವುದು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.


Click it and Unblock the Notifications








